ಸಾರಾಂಶ
-ಚುನಾವಣೆ ಕೂಡಲೇ ನಡೆಸದಿದ್ದರೆ ಹೋರಾಟ -ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಬಿಡದಿ ಹೋಬಳಿ ಬಿ.ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯನ್ನು ಕೋರಂ ನೆಪವೊಡ್ಡಿ ಮುಂದೂಡಿದ ಚುನಾವಣಾಧಿಕಾರಿ ವಿರುದ್ಧ ಕ್ರಮ ವಹಿಸಬೇಕು ಹಾಗೂ ಕೂಡಲೇ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಸಹಕಾರ ಸಂಘದ ಉಪನಿಬಂಧಕರಿಗೆ ಮನವಿ ಸಲ್ಲಿಸಿದರು.ಸಹಕಾರ ಸಂಘದ ಉಪನಿಬಂಧಕರ ಕಚೇರಿಗೆ ಆಗಮಿಸಿದ ಡೇರಿ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪನಿಬಂಧಕರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥ ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಿ.ಗೊಲ್ಲಹಳ್ಳಿ ಡೇರಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಅ.5ರಂದು ಬೆಳಗ್ಗೆ 9ರಿಂದ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಚುನಾವಣಾಧಿಕಾರಿಗಳಾದ ಪದ್ಮಾವತಿಯವರು 9.45ಕ್ಕೆ ಸಂಘದ ಕಚೇರಿಗೆ ಆಗಮಿಸಿದರು. ಸಂಘದ 10 ನಿರ್ದೇಶಕರ ಪೈಕಿ 7 ನಿರ್ದೇಶಕರು ಚುನಾವಣೆಯಲ್ಲಿ ಹಾಜರಾಗಿದ್ದರು. ನಿರ್ದೇಶಕರ ಸಹಿ ಪಡೆಯುವ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಿ.ಕೆ.ದಿವಾಕರ್ ಮೊಬೈಲ್ ಗೆ ಕರೆ ಬಂದಿತು.
ಕಾರ್ಯದರ್ಶಿಯಿಂದ ಮೊಬೈಲ್ ಪಡೆದ ಚುನಾವಣಾಧಿಕಾರಿ ಪದ್ಮಾವತಿ ಸಂಭಾಷಣೆ ನಡೆಸುತ್ತಲೇ ಸಮಯ ಕಳೆದರು. ಸಂಘದ ಕಚೇರಿಯಲ್ಲಿ ಹಾಜರಿದ್ದ ನಿರ್ದೇಶಕರಿಂದ ಸಹಿ ಪಡೆಯಲೇ ಇಲ್ಲ. ಕೋರಂ ಕೊರತೆ ನೆಪವೊಡ್ಡಿ ಚುನಾವಣೆ ರದ್ದುಗೊಳಿಸಲಾಗಿದೆ ಎಂದು ಷರಾ ಬರೆದು ಚುನಾವಣಾಧಿಕಾರಿಗಳು ಸಂಘದ ಕಚೇರಿಯಲ್ಲಿ ಕಾಲ್ಕಿತ್ತರು ಎಂದು ಆರೋಪಿಸಿದರು.ಸಂಘದ ಹಿತದೃಷ್ಟಿಯಿಂದ ಕೂಡಲೇ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಬೇಕು ಹಾಗೂ ತಪ್ಪಿತಸ್ಥ ಚುನಾವಣಾಧಿಕಾರಿ ಪದ್ಮಾವತಿ ವಿರುದ್ಧ ಕಾನೂನು ರೀತಿ ಕ್ರಮ ವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ನಿರ್ದೇಶಕರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಗೊಲ್ಲಹಳ್ಳಿ ಎಂಪಿಸಿಎಸ್ ನಿರ್ದೇಶಕರಾದ ಮೂಡಲಗಿರಿಯಪ್ಪ, ರತ್ನಮ್ಮ, ಜಿ.ಡಿ.ಜಗದೀಶ್, ಶಂಕರಯ್ಯ, ಜಿ.ಎಸ್.ಮುದ್ದಯ್ಯ, ರವಿಕುಮಾರ್, ಪುಟ್ಟಸ್ವಾಮಯ್ಯ, ಪುರಸಭಾ ಮಾಜಿ ಸದಸ್ಯ ಕುಮಾರ್, ಜೆಡಿಎಸ್ ರಾಜ್ಯ ವಕ್ತಾರ ವಿ.ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ಶಿವಲಿಂಗಪ್ಪ, ಮುಖಂಡರಾದ ಕಲ್ಲಗೋಪಹಳ್ಳಿಕೆಂಪಣ್ಣ, ಪಾಪಣ್ಣ, ಇಟ್ಟಮಡು ಗೋಪಾಲ್, ಪುಷ್ಪ, ಶಿವರಾಮು, ಸತೀಶ್, ರವಿ, ಗಿರೀಶ್, ಲಕ್ಷ್ಮಣ್, ಬೈರೇಗೌಡ, ಗೋವಿಂದರಾಜು ಇತರರಿದ್ದರು.