ಸಾರಾಂಶ
- ಒಂದು ಬಾರಿಯ ಕ್ರಮವಾಗಿ ಬಿ ಖಾತೆ
- 3 ತಿಂಗಳ ಗಡುವು: ಸಿಎಂ ತಾಕೀತು---
ಎ ಖಾತೆ ಎಂದರೇನು?ಯಾವುದೇ ಅಕ್ರಮ ಎಸಗದೇ ಸಂಪೂರ್ಣ ನಿಯಮಬದ್ಧವಾಗಿ ಕಟ್ಟಡ/ಬಡಾವಣೆ ನಿರ್ಮಾಣ ಮಾಡಿದರೆ ಅವವುಗಳಿಗೆ ಪೌರಾಡಳಿತ ಸಂಸ್ಥೆಗಳು ಖಾತೆ ನೀಡುತ್ತವೆ. ಅದಕ್ಕೆ ‘ಎ ಖಾತೆ’ ಎನ್ನುತ್ತಾರೆ.---ಬಿ ಖಾತೆ ಎಂದರೇನು?ನಿಯಮಬದ್ಧವಾಗಿ ಕಟ್ಟಡಗಳು/ಬಡಾವಣೆ ನಿರ್ಮಾಣ ಆಗದೇ ಇದ್ದರೆ ಅಂಥವಕ್ಕೆ ಖಾತೆ ಲಭ್ಯ ಆಗಲ್ಲ. ಅವನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಖಾತೆ ನೀಡಲಾಗುತ್ತದೆ. ಅದಕ್ಕೆ ‘ಬಿ ಖಾತೆ’ ಎನ್ನುತ್ತಾರೆ.---- ರಾಜ್ಯದ ಎಲ್ಲ ಭಾಗಗಳಲ್ಲಿನ ಅಕ್ರಮ ಬಡಾವಣೆ ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕು
- ಬಿ-ಖಾತಾ ನಿಡಿ ಅಕ್ರಮ ಬಡಾವಣೆಯ ಆಸ್ತಿಗಳಿಂದ ತೆರಿಗೆ ವಸೂಲಿ ಮಾಡಬೇಕು- ಹೊಸದಾಗಿ ಅಕ್ರಮ ಬಡಾವಣೆ ತಲೆ ಎತ್ತಿದರೆ ಅಧಿಕಾರಿಗಳೇ ಹೊಣೆ: ಮುಖ್ಯಮಂತ್ರಿ- 2024ರ ಸೆ.10ಕ್ಕಿಂತ ಮುಂಚಿನ ಬಡಾವಣೆಗಳಿಗಷ್ಟೇ ಬಿ ಖಾತಾ ಹಂಚಿಕೆ: ರಹೀಂ
--ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿನ ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಂದ ತೆರಿಗೆ ಸಂಗ್ರಹಕ್ಕಾಗಿ ಒಂದು ಬಾರಿಯ ಕ್ರಮವಾಗಿ ಬಿ-ಖಾತಾ ನೀಡಲು ‘ಬಿ-ಖಾತಾ ಅಭಿಯಾನ’ ಆರಂಭಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಯೋಜನಾ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ, ರಾಜ್ಯಾದ್ಯಂತ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದರು. ಜತೆಗೆ ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಂದ ತೆರಿಗೆ ವಸೂಲಿ ಮಾಡುವ ಸಂಬಂಧ ಆಸ್ತಿಗಳಿಗೆ ಬಿ-ಖಾತಾ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ನಗರ, ಪಟ್ಟಣ, ಪಾಲಿಕೆ ಹಾಗೂ ಹಳ್ಳಿ ವ್ಯಾಪ್ತಿಯಲ್ಲೂ ಅನಧಿಕೃತ ಬಡಾವಣೆಗಳಿದ್ದು, ಅವುಗಳನ್ನು ಸಕ್ರಮ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಬಡಾವಣೆಗಳ ರಚನೆಗೆ ಅವಕಾಶ ನೀಡಬಾರದು. ಅನಧಿಕೃತ ಬಡಾವಣೆಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಅವುಗಳಿಂದ ಕಂದಾಯ ಬರುತ್ತಿಲ್ಲ. ಹೀಗಾಗಿ ಜನರಿಗೆ ಸಮರ್ಪಕವಾಗಿ ಸವಲತ್ತು ಸಿಗುತ್ತಿಲ್ಲ ಹಾಗೂ ಸ್ಥಳೀಯ ಸಂಸ್ಥೆಗಳ ಆದಾಯ ಮೂಲ ಇಲ್ಲದಂತಾಗಿದೆ. ಈ ಅನಾನುಕೂಲಕ್ಕೆ ಅಂತ್ಯ ಹಾಡಬೇಕು ಎಂದರು.ಬಿ-ಖಾತಾ ನೀಡಿ ಅಕ್ರಮಕ್ಕೆ ಕೊನೆ:ಅನಧಿಕೃತ ಬಡಾವಣೆಗಳಿಗೆ ಖಾತಾ ಇಲ್ಲದ ಕಾರಣ ಕಂದಾಯ ಪಾವತಿ ಅಥವಾ ವಸೂಲಿ ಮಾಡಲಾಗುತ್ತಿಲ್ಲ. ಹೀಗಾಗಿ ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಒಂದು ಬಾರಿ ಬಿ-ಖಾತಾ ನೀಡಿ ಕಂದಾಯ ವಸೂಲಿ ಆರಂಭಿಸಬೇಕು. ಈ ಕ್ರಮವನ್ನು ಒಂದು ಬಾರಿಗೆ ಮಾತ್ರ ಸೀಮಿತಗೊಳಿಸಬೇಕು. ಮಂಗಳವಾರದಿಂದಲೇ ಬಿ-ಖಾತಾ ಅಭಿಯಾನ ನಡೆಸಬೇಕು ಹಾಗು ಮುಂದಿನ 3 ತಿಂಗಳೊಳಗೆ ಎಲ್ಲ ಅನಧಿಕೃತ ಬಡಾವಣೆಗಳ ಆಸ್ತಿಗಳಿಗೆ ಬಿ-ಖಾತಾ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.ಅಕ್ರಮ ಬಡಾವಣೆ ನಿರ್ಮಿಸಿದರೆ ವಿರುದ್ಧ ಕ್ರಮ:ಅಕ್ರಮ ಬಡಾವಣೆ ನಿರ್ಮಾಣ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಅನಧಿಕೃತ ಬಡಾವಣೆಗಳು ತಲೆ ಎತ್ತಿದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಗರ ಯೋಜನಾ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಹಾಗೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ ಸಿದ್ದರಾಮಯ್ಯ, ಬಿ-ಖಾತಾ ನೀಡುವ ಸಂಬಂಧ ಮಧ್ಯವರ್ತಿಗಳ ಮಧ್ಯಪ್ರವೇಶ ಮಾಡುವುದನ್ನು ತಡೆಯಬೇಕು ಎಂದು ಹೇಳಿದರು.ಬಿ-ಖಾತಾ ನೀಡುವ ವಿಚಾರದಲ್ಲಿ ನಿವೇಶನ ಮತ್ತು ಮನೆ ಮಾಲೀಕರಿಗೆ ಯಾವುದೇ ಸಮಸ್ಯೆಯಾಗಬಾರದು. ಬಡವರು, ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಒಂದು ಬಾರಿ ಪರಿಹಾರ ಕಲ್ಪಿಸಲಾಗುತ್ತಿದೆ. 3 ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಮುಗಿಸಬೇಕು. ಹೊಸ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದರು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.----
ಅನಧಿಕೃತ ಬಡಾವಣೆ ಸಂಬಂಧ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ನೀಡಿದ ಮೇಲೆ ಮುನ್ಸಿಪಲ್ ಆ್ಯಕ್ಟ್‌ಗೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಅನಧಿಕೃತ ಕಂದಾಯ ಬಡಾವಣೆಗಳ ಆಸ್ತಿಗಳಿಗೆ ಬಿ-ಖಾತಾ ನೀಡಲು ನಿರ್ಧರಿಸಿ, ಅದಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆಗಳ ಆಸ್ತಿಗೆ ಬಿ-ಖಾತಾ ನೀಡುವ ಅಭಿಯಾನ ನಡೆಸುವಂತೆ ನಿರ್ದೇಶಿಸಲಾಗಿದೆ.ಸಿದ್ದರಾಮಯ್ಯ, ಮುಖ್ಯಮಂತ್ರಿ
----------2024ರ ಸೆ.10ಕ್ಕಿಂತ ಮುಂಚಿನ ಬಡಾವಣೆಗಳಿಗೆ ಅನ್ವಯ: ಸಚಿವ
- ಆನಂತರ ನಿರ್ಮಾಣವಾದ ಬಡಾವಣೆ ವಿರುದ್ಧ ಕ್ರಮ- ಬಿ-ಖಾತಾದಿಂದ 4500 ಕೋಟಿ ರು. ತೆರಿಗೆ ಸಂಗ್ರಹ?
ಬಿ-ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನೀಡಿ ಮಾಹಿತಿ ನೀಡಿದ ಪೌರಾಡಳಿತ ಸಚಿವ ರಹೀಂ ಖಾನ್, ಅನಧಿಕೃತ ಕಂದಾಯ ಬಡಾವಣೆಗಳ ಆಸ್ತಿಗಳಿಗೆ ಬಿ-ಖಾತಾ ನೀಡುವ ಸಂಬಂಧ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈಗಿರುವ ಅನಧಿಕೃತ ಬಡಾವಣೆಗಳಿಂದ ತೆರಿಗೆ ಬರುತ್ತಿಲ್ಲ. ಹೀಗಾಗಿ ಅವುಗಳಿಗೆ ಬಿ-ಖಾತಾ ನೀಡುವ ಮೂಲಕ ಕಂದಾಯ ವಸೂಲಿ ಮಾಡಲಾಗುವುದು. 2024ರ ಸೆ. 10ಕ್ಕಿಂತ ಹಿಂದೆ ರಚನೆಯಾದ ಬಡಾವಣೆಗಳಿಗೆ ಇದು ಅನ್ವಯವಾಗಲಿದೆ. ಒಂದು ವೇಳೆ ಆ ಅವಧಿಯ ನಂತರ ಬಡಾವಣೆಗಳನ್ನು ನಿರ್ಮಿಸಲಾಗಿದ್ದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 40ರಿಂದ 50 ಲಕ್ಷ ಆಸ್ತಿಗಳಿಗೆ ಬಿ-ಖಾತಾ ನೀಡಬೇಕಿದೆ. ಸದ್ಯ 1,500ರಿಂದ 1,600 ಕೋಟಿ ರು. ಆಸ್ತಿ ತೆರಿಗೆ ವಸೂಲಿಯಾಗುತ್ತಿದೆ. ಬಿ-ಖಾತಾ ನೀಡಿ ತೆರಿಗೆ ವಸೂಲಿ ಮಾಡುವುದರಿಂದ ಅದು ಮೂರುಪಟ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿಸಿದರು.