ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬಿ.ಎಂ.ಎಜುಕೇಷನಲ್ ಟ್ರಸ್ಟ್‌ನಿಂದ ಮಾ.9ರಂದು ಪಟ್ಟಣದ ಹೊರವಲಯದ ಶೆಟ್ಟಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿ.ಎಂ.ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಂ. ರಾಮಕೃಷ್ಣ ತಿಳಿಸಿದರು.ಶಾಲಾ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕೆಂಬ ಉದ್ದೇಶದೊಂದಿಗೆ ತಂದೆ ತಾಯಿ ಅವರ ಹೆಸರಿನಲ್ಲಿ ಶಾಲೆ ಆರಂಭಿಸಲಾಗುತ್ತಿದೆ. ತಾಲೂಕಿನಲ್ಲಿಯೇ ಮೊದಲ ಸಿಬಿಎಸ್‌ಸಿ ಪಠ್ಯಕ್ರಮ ಹೊಂದಿರುವುದರ ಜೊತೆಗೆ ಮೂಲ ಸೌಲಭ್ಯ ಹೊಂದಿರುವ ಸುಸಜ್ಜಿತ ಶಾಲೆಯಾಗಿದೆ ಎಂದರು.ಕುಕ್ಕೆ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ತುಮಕೂರು ರಾಮಕೃಷ್ಣ ವಿರೇಶಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ ಅವರ ಸಾನ್ನಿಧ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಲೆಯನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಿ.ಎಂ. ಟ್ರಸ್ಟ್ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ವಹಿಸಲಿದ್ದಾರೆ ಎಂದರು.
ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಾಯಿಬಾಬಾ ಮಂದಿರವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಲಿದ್ದಾರೆ. ಶಾಸಕ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಶಾಲಾ ಆಡಳಿತ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದರು.ಅತಿಥಿಗಳಾಗಿ ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಸತೀಶ್‌ರೆಡ್ಡಿ, ರಮೇಶ್ ಬಂಡಿಸಿದ್ದೇಗೌಡ, ಎಚ್.ಡಿ.ರಂಗನಾಥ್, ಕೆ.ಎಂ ಉದಯ್, ಪಿ. ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಜಿ.ಟಿ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ಮಧುಜಿ ಮಾದೇಗೌಡ, ಗೂಳಿಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆಂದು ವಿವರಿಸಿದರು.
ಬಿ.ಎಂ.ಪಬ್ಲಿಕ್ ಸ್ಕೂಲ್‌ನಲ್ಲಿ ಮ್ಯಾಂಟೋಸರಿಯಿಂದ 7ನೇ ತರಗತಿ ವರೆಗೆ ಶಿಕ್ಷಣವನ್ನು ನೀಡಲು ಉದ್ದೇಶಿಸಲಾಗಿದೆ. 900 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ದ್ವಿತೀಯ ಪಿಯುಸಿ ವರೆವಿಗೂ ತರಗತಿಯನ್ನು ವಿಸ್ತರಿಸಲು ಚಿಂತಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಅದರ್ಶ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ತಳಗವಾದಿ ಪ್ರಕಾಶ್, ಮುಖಂಡರಾದ ಎಂ.ಸಿ ಸತೀಶ್ ಮಲ್ಲಯ್ಯ ಇದ್ದರು.