ಬಿ - ಖಾತೆ ಮಾಡಿಸಲು ಮಾಲೀಕರ ನಿರಾಸಕ್ತಿ

| Published : Apr 21 2025, 12:57 AM IST

ಸಾರಾಂಶ

ಚಿಕ್ಕಮಗಳೂರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಖಾಲಿ ನಿವೇಶನ ಅಥವಾ ಮನೆಯನ್ನು ಕಟ್ಟಿಕೊಂಡಿದ್ದರೆ ಅವುಗಳಿಗೆ ಬಿ - ಖಾತೆ ಮಾಡಿಕೊಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಜಾರಿಗೆ ಬಂದು ಒಂದೂವರೆ ತಿಂಗಳು ಕಳೆದರೂ ಕೂಡ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರು ಖಾತೆ ಮಾಡಿಸಿಕೊಂಡಿಲ್ಲ.

ಆರ್‌. ತಾರಾನಾಥ್‌ ಆಟೋಕರ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಖಾಲಿ ನಿವೇಶನ ಅಥವಾ ಮನೆಯನ್ನು ಕಟ್ಟಿಕೊಂಡಿದ್ದರೆ ಅವುಗಳಿಗೆ ಬಿ - ಖಾತೆ ಮಾಡಿಕೊಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಜಾರಿಗೆ ಬಂದು ಒಂದೂವರೆ ತಿಂಗಳು ಕಳೆದರೂ ಕೂಡ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರು ಖಾತೆ ಮಾಡಿಸಿಕೊಂಡಿಲ್ಲ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಸುಮಾರು 4 ಸಾವಿರ ಖಾಲಿ ನಿವೇಶನ ಹಾಗೂ ಮನೆ ಗಳು ಇವೆ. ಆದರೆ, ಬಿ - ಖಾತೆ ಮಾಡಿ ಕೊಡಲು ಕೋರಿ ಈವರೆಗೆ ಬಂದಿರುವ ಅರ್ಜಿಗಳ ಸಂಖ್ಯೆ 400 ಮಾತ್ರ. ಇವುಗಳಲ್ಲಿ 130 ಬಿ - ಖಾತೆಗಳನ್ನು ಈವರೆಗೆ ವಿತರಣೆ ಮಾಡಲಾಗಿದೆ.

ಎನ್‌.ಆರ್‌.ಪುರ ಪಟ್ಟಣ ಪಂಚಾಯ್ತಿಯಲ್ಲಿ 15 ಅರ್ಜಿಗಳು ಬಂದಿದ್ದು, ಇವುಗಳಲ್ಲಿ 3 ಅರ್ಜಿಗಳಿಗೆ ಮಾತ್ರ ಬಿ - ಖಾತೆ ಆಗಿದೆ. ಕಡೂರು ಪಟ್ಟಣ ಪಂಚಾಯ್ತಿಯಲ್ಲಿ 69 ಬಿ - ಖಾತೆಯಾಗಿದ್ದು, ಇನ್ನು 10 ಅರ್ಜಿಗಳು ವಿಲೇವಾರಿ ಆಗಬೇಕಾಗಿದೆ. ಹೀಗೆ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿ- ಖಾತೆ ಮಾಡಿಸಿಕೊಳ್ಳಲು ಮಾಲೀಕರು ಮುಂದೆ ಬರುತ್ತಿಲ್ಲ.

--- ಬಾಕ್ಸ್‌ ---ನಿರಾಸಕ್ತಿ ಏಕೆ ?- ನಿವೇಶನ ಅಥವಾ ಮನೆ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಇದ್ದರೆ, ಅದನ್ನು ಖಾತೆ ಮಾಡಿಸಬೇಕು ಅವಕಾಶ ನೀಡ ಲಾಗಿದೆ. ಇದಕ್ಕೆ ಬಿ- ಖಾತೆ ನೀಡಲಾಗುವುದು. ಇದು, ಇ - ಖಾತೆ ರೀತಿಯಲ್ಲಿ ಸಿಂಧು ಆಗೋದಿಲ್ಲ. ಬಿ - ಖಾತೆ ಮಾಡಿಸಿದರೆ ಆ ಸ್ವತ್ತನ್ನು ಮಾರಾಟ ಮಾಡಬಹುದು. ಆದರೆ, ಖಾಲಿ ನಿವೇಶನ ಇದ್ದರೆ ಮನೆ ಕಟ್ಟಲು ಸ್ಥಳೀಯ ಸಂಸ್ಥೆಗಳು ಲೈಸನ್ಸ್‌ ಕೊಡಲು ಅವಕಾಶ ಇಲ್ಲ. ಹೊಸ ಮನೆ ನಿರ್ಮಾಣಕ್ಕೆ ಬೋರ್‌ ಕೊರೆಸಲು ಅನುಮತಿ ನೀಡುವುದಿಲ್ಲ. ಬ್ಯಾಂಕ್‌ಗಳಲ್ಲಿ ಹೌಸಿಂಗ್‌ ಲೋನ್‌ ಸಿಗುವುದಿಲ್ಲ.

- ಬಿ ಖಾತೆ ಮಾಡಿಸಿದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಹೆಚ್ಚಳವಾಗಲಿದೆ. ಅಂದರೆ, ಖಾತೆ ಮಾಡಿಸುವ ಮೊದಲ ವರ್ಷದಲ್ಲಿ ಡಬಲ್‌ ಕಂದಾಯ ಪಾವತಿ ಮಾಡಬೇಕು. ಆಗ ನಗರಸಭೆ ಪ್ರಾಪರ್ಟಿ ಐಡಿ ಕೊಡುತ್ತದೆ. ಹಾಗಾಗಿ ಪ್ರತಿ ವರ್ಷ ಸಿಂಗಲ್‌ ಕಂದಾಯವನ್ನು ಪಾವತಿ ಮಾಡಬೇಕು. ಅಂದರೆ, ಬಿ ಖಾತೆಯಿಂದ ಸ್ವತ್ತಿನ ಮಾಲೀಕರಿಗೆ ಯಾವುದೇ ಪ್ರಯೋಜನ ಇಲ್ಲ ಎಂಬುದು ಸಾರ್ವಜನಿಕರಿಗೆ ಮನವರಿಕೆಯಾಗಿದೆ. ಅದ್ದರಿಂದ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.

--ಮೇ 10 ಡೆಡ್‌ ಲೈನ್ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿದ್ದರೆ ಅಥವಾ ಖಾಲಿ ನಿವೇಶನ ಇದ್ದರೆ, ಸ್ವತ್ತಿನ ಮಾಲೀಕರು ಬಿ - ಖಾತೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. 2024ರ ಸೆಪ್ಟೆಂಬರ್‌ 10 ರ ಹಿಂದೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಆಗಿದ್ದರೆ ಅಂತಹವರು ಕ್ರಮಪತ್ರ, ಇಸಿ, ಫಾರಂ ನಂಬರ್‌ 15, ಸ್ವತ್ತಿನ ಪೋಟೋ, ಮಾಲೀಕರ ಭಾವಚಿತ್ರ, ಪಾನ್‌ ಅಥವಾ ವೋಟರ್‌ ಐಡಿ ಹಾಗೂ ಸಂಬಂಧಿತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಇದಕ್ಕೆ ಸರ್ಕಾರ ನಿಗದಿಪಡಿಸಿರುವುದು ಮೇ 10 ಕೊನೆ ದಿನ. ಆನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

--ಇ - ಖಾತೆ ಮಾಡಿಸಲು ಹಿಂದೇಟು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಮನೆಗಳು ಹಾಗೂ ಖಾಲಿ ನಿವೇಶನಗಳು ಖಾತೆಯಾಗಿವೆ. ಆದರೆ, ಸ್ವತ್ತಿನ ಮಾಲೀಕರು ಇ - ಖಾತೆ ಮಾಡಿಸಿಕೊಳ್ಳುತ್ತಿಲ್ಲ. ಮಾರಾಟಕ್ಕೆ ಇ- ಖಾತೆ ಕಡ್ಡಾಯಗೊಳಿಸಿದ್ದರಿಂದ ಅವಶ್ಯಕತೆ ಇರುವವರು ಮಾತ್ರ ಬರುತ್ತಿದ್ದಾರೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರ ಸಾರ್ವಜನಿಕರ ಸ್ವತ್ತುಗಳು ಇವೆ. ಈ ಪೈಕಿ 27,813 ಸ್ವತ್ತು ಗಳು ಮಾತ್ರ ಇ - ಖಾತೆಯಾಗಿವೆ. ಉಳಿದವರು ಖಾತೆ ಆಗಬೇಕಾಗಿದೆ. ಕಡೂರು ಪಟ್ಟಣದಲ್ಲಿ 15,163 ಸ್ವತ್ತುಗಳಿದ್ದು, ಈ ಪೈಕಿ 8937 ಸ್ವತ್ತುಗಳು ಇ - ಖಾತೆಯಾಗಿವೆ. ಬೀರೂರು ಪುರಸಭೆಯಲ್ಲಿ 8910 ಖಾತೆಗಳಿದ್ದು, 5621 ಇ - ಖಾತೆ ಯಾಗಿವೆ. ಇನ್ನು 3162 ಸ್ವತ್ತುಗಳು ಇ - ಖಾತೆಯಾಗಬೇಕಾಗಿದೆ. ಹೀಗೆ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಇ - ಖಾತೆಯಾಗಬೇಕಾಗಿರುವ ಸ್ವತ್ತುಗಳು ಇವೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಇ- ಖಾತೆ ಮತ್ತು ಬಿ- ಖಾತೆ ಅಭಿಯಾನವನ್ನು ಆಯೋಜನೆ ಮಾಡಿದೆ.ಜಿಲ್ಲೆಯ ಇ - ಆಸ್ತಿಗಳ ವಿವರ

----------------------------------------------

ಸ್ಥಳೀಯ ಸಂಸ್ಥೆಗಳುಅಧಿಕೃತ ಸ್ವತ್ತುಗಳು

--------------------------------------------ಶೃಂಗೇರಿ807

---------------------------

ಎನ್‌.ಆರ್‌.ಪುರ1146

---------------------------------

ಕೊಪ್ಪ1391

----------------------

ಮೂಡಿಗೆರೆ2185

----------------------------

ಅಜ್ಜಂಪುರ1885

---------------------------

ಬೀರೂರು5621

--------------------------

ತರೀಕೆರೆ6373

--------------------------

ಕಡೂರು8937

----------------------------

ಚಿಕ್ಕಮಗಳೂರು27813

---------------------------

ಕಂದಾಯ ಭೂಮಿಯಲ್ಲಿ ಮನೆಯನ್ನು ಕಟ್ಟಿಕೊಂಡಿರುವ ಹಲವು ಬಡಾವಣೆಗಳಿಗೆ ಬೀದಿ ದೀಪ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸ್ವತ್ತನ್ನು ನಗರಸಭೆಯಲ್ಲಿ ಬಿ - ಖಾತೆ ಮಾಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಖಾತೆ ಮಾಡಿಸಿಕೊಳ್ಳದೆ ಹೋದರೆ ಮೂಲಭೂತ ಸವಲತ್ತುಗಳನ್ನು ಕಡಿತಗೊಳಿಸಲಾಗುವುದು.- ಬಿ.ಸಿ. ಬಸವರಾಜ್‌

ಪೌರಾಯುಕ್ತರು, ಚಿಕ್ಕಮಗಳೂರು ನಗರಸಭೆಪೋಟೋ ಫೈಲ್‌ ನೇಮ್‌ 20 ಕೆಸಿಕೆಎಂ 1