ಸಾರಾಂಶ
ಚಿಕ್ಕಮಗಳೂರು, ಸುದೀರ್ಘ 70 ವರ್ಷಗಳ ಕಾಲ ತಮ್ಮ ವಿಶೇಷ ಅಭಿನಯದ ಮೂಲಕ ಚಲನಚಿತ್ರರಂಗವನ್ನು ಆಳಿ ಜನಮನ ಗೆದ್ದವರು ಬಿ.ಸರೋಜಾದೇವಿ ಎಂದು ಸುಗಮ ಸಂಗೀತ ಗಂಗಾದ ಅಧ್ಯಕ್ಷ, ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.
- ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಪೂರ್ವಿ ಗಾನಯಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸುದೀರ್ಘ 70 ವರ್ಷಗಳ ಕಾಲ ತಮ್ಮ ವಿಶೇಷ ಅಭಿನಯದ ಮೂಲಕ ಚಲನಚಿತ್ರರಂಗವನ್ನು ಆಳಿ ಜನಮನ ಗೆದ್ದವರು ಬಿ.ಸರೋಜಾದೇವಿ ಎಂದು ಸುಗಮ ಸಂಗೀತ ಗಂಗಾದ ಅಧ್ಯಕ್ಷ, ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು. ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಭಾಗಿತ್ವದಲ್ಲಿ ಖ್ಯಾತ ನಟಿ ಬಿ.ಸರೋಜಾದೇವಿ ನಟನೆ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಪೂರ್ವಿ ಗಾನಯಾನ- 110 ಉದ್ಘಾಟಿಸಿ ಮಾತನಾಡಿದರು. 87 ವರ್ಷಗಳ ಕಾಲ ಬದುಕಿದ್ದ ಅವರು ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದವರು. ದೇಶ ಕಂಡ ಅಪರೂಪದ ಮಹಾನ್ ಕಲಾವಿದೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸರೋಜಾದೇವಿ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಸಹ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿದ್ದಾರೆ. ಪತಿ ಹರ್ಷ ಅವರನ್ನು ಕಳೆದುಕೊಂಡ ಬಳಿಕ ಒಂದು ವರ್ಷ ಮೌನಕ್ಕೆ ಶರಣಾಗಿದ್ದ ಅವರು, ಜನರ ಅಪೇಕ್ಷೆ ಹಾಗೂ ಚಿತ್ರರಂಗದ ಪ್ರಮುಖರ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗದಲ್ಲಿ ಮುಂದುವರಿ ದಿದ್ದರು. ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ತೆಲುಗಿನಲ್ಲಿ ಎನ್.ಟಿ.ರಾಮರಾವ್, ನಾಗೇಶ್ವರ ರಾವ್ ಅವರಂತ ದಿಗ್ಗಜರ ಜೊತೆ ಅಭಿನಯಿಸಿದ್ದರು. ಕನ್ನಡ ಸಿನಿಮಾಗಳಲ್ಲಿನ ನಟನೆಯಂತೂ ಅದ್ಭುತ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಬಿ.ಸರೋಜಾ ದೇವಿ ಯವರು ಈ ನಾಡು ಕಂಡಂತಹ ಅತ್ಯದ್ಭುತ ನಟಿ. ಬದುಕಿದವರೆ ಅವರಂತೆ ಬದುಕಬೇಕು. ನಮ್ಮ ಜೀವಿತಾವಧಿಯಲ್ಲಿ ನಮ್ಮ ಬಗ್ಗೆ ಉತ್ತಮ ಹೆಸರು ಉಳಿಸಿಕೊಂಡು ನಾವು ಸತ್ತ ಮೇಲೂ ಜನರು ನಮ್ಮನ್ನು ನೆನೆಯುವಂತಿರಬೇಕು. ಈ ನಿಟ್ಟಿನಲ್ಲಿ ಎಂ.ಎಸ್.ಸುಧೀರ್ ನೇತೃತ್ವದ ತಂಡ ಗಾಯನವನ್ನು 110ನೇ ಸರಣಿಯಲ್ಲಿ ಮುಂದುವರಿಸುತ್ತಿರುವುದು ವಿಶೇಷ ಎಂದರು.ರೂಪ ನಾಯ್ಕ್, ಸುಮಾ ಪ್ರಸಾದ್, ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ನಡೆದ ಗಾಯನದಲ್ಲಿ ಚೇತನ್ ರಾಮ್, ಶ್ರೀಕಾಂತ್, ರೂಪ ಅಶ್ವಿನ್, ಅನುಷ, ರುಕ್ಸಾನಾ ಕಾಚೂರ್, ಮೇಘ, ಚೈತನ್ಯ, ಪೃಥ್ವಿಶ್ರೀ ಹಾಗೂ ಅದ್ವಿತ್ ದೇಶ್ ಬಿ.ಸರೋಜಾದೇವಿ ನಟನೆಯ ಚಿತ್ರಗೀತೆಗಳಿಗೆ ಧ್ವನಿಯಾಗಿ ಸಂಗೀತ ಸುಧೆ ಹರಿಸಿದರು. ಲಯನ್ಸ್ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ಬಿ.ಎನ್.ವೆಂಕಟೇಶ್, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷ ಎಂ.ಎಸ್.ಸುಧೀರ್ ಇತರರಿದ್ದರು.
25 ಕೆಸಿಕೆಎಂ 2ಚಿಕ್ಕಮಗಳೂರಿನ ಎಂ.ಇ.ಎಸ್. ಕಾಲೇಜು ಸಭಾಂಗಣದಲ್ಲಿ ಖ್ಯಾತ ನಟಿ ಬಿ.ಸರೋಜಾದೇವಿ ನಟನೆಯ ಚಿತ್ರಗೀತೆಗಳ ಗಾಯನ ಪೂರ್ವಿ ಗಾನಯಾನ ಕಾರ್ಯಕ್ರಮವನ್ನು ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಉದ್ಘಾಟಿಸಿದರು.