ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ‘ಮೈಸೂರು ಚಲೋ’ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.ಶುಕ್ರವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಪಾದಯಾತ್ರೆಗೆ ಶನಿವಾರ ಬೆಳಿಗ್ಗೆ ಚಾಲನೆ ಸಿಗಲಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ. ಇದು ಬಡವರ ವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರ್ಕಾರ. ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಶೂನ್ಯ ಕೊಡುಗೆ ನೀಡಿದೆ. ಇದೊಂದು ಅಸಮರ್ಥ ಸರ್ಕಾರ. ಅಹಿಂದ ಹೆಸರಿನಿಂದ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದೆ. ಪರಿಶಿಷ್ಟರ ಹಣ ಲೂಟಿ ಮಾಡಿದೆ ಎಂದು ಆಪಾದಿಸಿದರು.
ಬಿಜೆಪಿ- ಜೆಡಿಎಸ್ ಜೊತೆಗೂಡಿ ಸದನದ ಒಳಗೆ ಮತ್ತು ಹೊರಗೆ ನಾವು ಹೋರಾಟ ಮಾಡಿ ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ. ಹಗರಣ, ಭ್ರಷ್ಟಾಚಾರ ಕುರಿತ ನಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಬೇಕು ಎಂದರು.ಮುಡಾದಲ್ಲಿ ಕಮಿಷನರ್ ಮೂಲಕ ಸಾವಿರಾರು ನಿವೇಶನ ಲೂಟಿ ಮಾಡಿ ಅಪಾರ ಹಣ ಲೂಟಿ ಮಾಡಿದ್ದಾರೆ. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ; ಕೆಟ್ಟ ವ್ಯವಸ್ಥೆ ವಿರುದ್ಧ. ಕಾಂಗ್ರೆಸ್ ಸರ್ಕಾರದಲ್ಲಿ ಬಡವರು, ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಆಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಬರಲಿದ್ದಾರೆ. ಜನಬೆಂಬಲವೂ ಸಿಗಬೇಕಿದೆ ಎಂದು ಹೇಳಿದರು.