ಸಾರಾಂಶ
ವಿಶ್ವಪ್ರಸಿದ್ಧ ಯೋಗಗುರು ಬಾಬಾ ರಾಮ್ ದೇವ್ ಜಿ ಮತ್ತು ಹರಿದ್ಬಾರದ ಪತಂಜಲಿ ಯೋಗಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣ ಜೀ ಅವರು ಗುರುವಾರ ಶ್ರೀ ಪೇಜಾವರ ಮಠಕ್ಕೆ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ ವಿಶ್ವಪ್ರಸಿದ್ಧ ಯೋಗಗುರು ಬಾಬಾ ರಾಮ್ ದೇವ್ ಜಿ ಮತ್ತು ಹರಿದ್ಬಾರದ ಪತಂಜಲಿ ಯೋಗಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣ ಜೀ ಅವರು ಗುರುವಾರ ಶ್ರೀ ಪೇಜಾವರ ಮಠಕ್ಕೆ ಭೇಟಿ ನೀಡಿದರು.ಈರ್ವರನ್ನೂ ಶ್ರೀ ಮಠದ ಪರವಾಗಿ ಅಧಿಕಾರಿಗಳು, ವಿದ್ಯಾರ್ಥಿಗಳು ವೇದ ಘೋಷ ಸಹಿತ ಪೂರ್ಣಕುಂಭದೊಂದಿಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬರ ಮಾಡಿಕೊಂಡರು.ಶ್ರೀ ವಿಶ್ವೇಶತೀರ್ಥರ ಪಾದುಕೆ, ಭಾವಚಿತ್ರಗಳಿಗೆ ಎಲ್ಲರೂ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದ ಬಳಿಕ ಪೇಜಾವರ ಶ್ರೀಗಳು, ಇಬ್ಬರಿಗೂ ಸಂಸ್ಥಾನದ ಗೌರವ ಸಲ್ಲಿಸಿದರು.
ಈ ಸಂದರ್ಭ ಬಾಬಾ ರಾಮ್‌ದೇವ್ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮಗೆ ತಂದೆ ತಾಯಿ ಗುರು ಬಂಧು ಎಲ್ಲವೂ ಆಗಿ ನೀಡಿದ ಪ್ರೀತಿ ವಾತ್ಸಲ್ಯವನ್ನು ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ. ಈಗ ಶ್ರೀ ವಿಶ್ವಪ್ರಸನ್ನ ತೀರ್ಥರೂ ಅವರ ಪ್ರತಿ ಸ್ವರೂಪರಾಗಿ ಕಾಣುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭ ಸುಬ್ರಹ್ಮಣ್ಯ ಭಟ್, ಬಾಲಾಜಿ ರಾಘವೇಂದ್ರಾಚಾರ್ಯ, ಭವರ್ ಲಾಲ್ ಜೀ, ವಾಸುದೇವ ಭಟ್ ಪೆರಂಪಳ್ಳಿ, ಕೃಷ್ಣಮೂರ್ತಿ ಭಟ್, ಸಂತೋಷ್ ಆಚಾರ್ಯ, ಸತೀಶ್ ಕುಮಾರ್, ರಾಘವೇಂದ್ರ ಭಟ್, ಪ್ರಶಾಂತ್ ಹೆಗ್ಡೆ ಮೊದಲಾದವರಿದ್ದರು.