ಸಾರಾಂಶ
ಬಾಬು ಜಗಜೀವನ್ ರಾಮ್ ಅತ್ಯುತ್ತಮ ಸಂಸದೀಯ ಪಟು, ಪ್ರಜಾಪ್ರಭುತ್ವವಾದಿ, ಪ್ರತಿಷ್ಠಿತ ಕೇಂದ್ರ ಮಂತ್ರಿ, ಸಮರ್ಥ ಆಡಳಿತಗಾರರಾಗಿದ್ದರು ಎಂದು ಉಪ ತಹಸೀಲ್ದಾರ್ ಶಿವಕುಮಾರ್ ಹೇಳಿದರು.
ಕನಕಪುರ: ಬಾಬೂಜಿ ಎಂದೇ ಖ್ಯಾತರಾಗಿರುವ ಜಗಜೀವನ್ ರಾಮ್ ಅವರು ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಅವರೊಬ್ಬ ಅತ್ಯುತ್ತಮ ಸಂಸದೀಯ ಪಟು, ಪ್ರಜಾಪ್ರಭುತ್ವವಾದಿ, ಪ್ರತಿಷ್ಠಿತ ಕೇಂದ್ರ ಮಂತ್ರಿ, ಸಮರ್ಥ ಆಡಳಿತಗಾರರಾಗಿದ್ದರು ಎಂದು ಉಪ ತಹಸೀಲ್ದಾರ್ ಶಿವಕುಮಾರ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನ ಮಂತ್ರಿ ಡಾ.ಬಾಬು ಜಗಜೀವನ್ ರಾಮ್ 38ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಹೋರಾಟಗಾರ ಆಗಿದ್ದಾರೆ. ಅವರು ತುಳಿತಕ್ಕೆ ಒಳಗಾದ ವರ್ಗಗಳ ಪರವಾಗಿ ಹೋರಾಟ ನಡೆಸಿದ ನಾಯಕ ಎಂದು ತಿಳಿಸಿದರು.ಮುಖಂಡ ನೀಲಿ ರಮೇಶ್ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಸಕ್ರಿಯ ಮತ್ತು ನಿರ್ಣಾಯಕ ಪಾತ್ರ ವಹಿಸಿದ್ದರು, ಗಾಂಧೀಜಿಯಿಂದ ಪ್ರೇರಿತರಾದ ಬಾಬೂಜಿ 1940ರ ಡಿಸೆಂಬರ್ 10ರಂದು ಬ್ರಿಟಿಷ್‌ರಿಂದ ಬಂಧನಕ್ಕೊಳಗಾಗಿ ಬಿಡುಗಡೆಯ ನಂತರ ಅಸಹಕಾರ ಚಳವಳಿ ಮತ್ತು ಸತ್ಯಾಗ್ರಹದಲ್ಲಿ ತೊಡಗಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದೇಶದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದು ಹೇಳಿದರು.
ಸಮಾಜ ಕಲ್ಯಾಣ ಅಧಿಕಾರಿ ಜಯಪ್ರಕಾಶ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್ ಬಾಬು, ಸಾಹಿತಿ ಕೂ.ಗಿ. ಗಿರಿಯಪ್ಪ, ಸೇರಿ ಹಲವು ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.