ಬಾಬು ಜಗಜೀವನ ರಾಮ್ ಶೋಷಿತರ ಹಕ್ಕಿಗಾಗಿ ಹೋರಾಡಿದವರು: ಕೆ.ಜೆ.ಜಾರ್ಜ್

| Published : Apr 06 2025, 01:50 AM IST

ಸಾರಾಂಶ

ಚಿಕ್ಕಮಗಳೂರು, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರು, ದಮನಿತರ ಪರವಾಗಿ ಹೋರಾಟ ನಡೆಸಿದ ಮಹಾನ್ ಪುರುಷ ಎಂದು ರಾಜ್ಯ ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್‌ರವರ 118ನೇ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರು, ದಮನಿತರ ಪರವಾಗಿ ಹೋರಾಟ ನಡೆಸಿದ ಮಹಾನ್ ಪುರುಷ ಎಂದು ರಾಜ್ಯ ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್‌ ಅವರ 118ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಬಾಬು ಜಗಜೀವನ್ ರಾಮ್ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯತಾವಾದಿ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅವರ ಕಾರ್ಯ ವ್ಯಾಪ್ತಿ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿರಲಿಲ್ಲ. ಅವರು ಶೋಷಿತ ವರ್ಗಗಳ ವಿಮೋಚನೆಗಾಗಿಯೂ ಹೋರಾಟ ಮಾಡಿದರು. ಬಿಹಾರ ಭೂಕಂಪ ಸಂತಸ್ತರಿಗೆ ಪರಿಹಾರ ಶಿಬಿರಗಳನ್ನು ಸ್ಥಾಪಿಸುವಂತಹ ಸಾಮಾಜಿಕ ಕಾರ್ಯ ಗಳಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದರು. ನಾಗರಿಕ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಂತಹ ಮುಖ್ಯ ವಾಹಿನಿಯ ಜನಪ್ರಿಯ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಈ ಚಳುವಳಿಗಳಲ್ಲಿ ತೊಡಗಿಸಿ ಕೊಂಡಿದ್ದಕ್ಕಾಗಿ ಅವರು ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬಾಬೂಜಿ ಎಂದೇ ಹೆಸರಾಗಿದ್ದ ಬಾಬು ಜಗಜೀವನರಾಮ್ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರ ವಾಯಿತು. ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ ಎಂದರು.

ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಜಗಜೀವನರಾಮ್ ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಬಡತನವಿದ್ದರೂ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸದೆ ಸುಶಿಕ್ಷಿತರಾದರು. ಬಿಹಾರ ಹಿಂದೆ ತೀರಾ ಬಡತನದಿಂದ ಕೂಡಿದ ರಾಜ್ಯವಾಗಿತ್ತು. ಅಲ್ಲಿ ಹುಟ್ಟಿ ಸಾಧನೆ ಮಾಡಿದ ಅವರು ಮಹನೀಯರು, ‘ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಬೆಂಬಲಿಸಿ, ಶಿಕ್ಷಣದ ಒಳ್ಳೆಯ ಮದ್ದು ಬೇರೊಂದಿಲ್ಲ, ಶೈಕ್ಷಣಿಕವಾಗಿ ಮುಂದೆ ಬನ್ನಿ’ ಎಂದು ಕರೆ ನೀಡಿದ್ದರು’ ಎಂದು ಹೇಳಿದರು.ವಕೀಲ ಆರ್.ರಮೇಶ್ ಉಪನ್ಯಾಸ ನೀಡಿ, ಜಗಜೀವನ್ ರಾಮ್ ಬಿಹಾರದ ಚಾಂದ್ವಾದಲ್ಲಿ ದಲಿತ ಕುಟುಂಬದಲ್ಲಿ ಜನಿಸಿ ದರು. ಅವರ ತಂದೆ ಬ್ರಿಟಿಷ್‌ ಸೈನ್ಯದಲ್ಲಿದ್ದರು. ನಂತರ ಅದನ್ನು ತೊರೆದು ತಮ್ಮ ಹುಟ್ಟೂರಿನಲ್ಲಿ ಕೃಷಿ ಭೂಮಿಯನ್ನು ಅವಲಂಬಿಸಿದ್ದರು. ಅವರನ್ನು ಅಸ್ಪೃಶ್ಯ ಎಂದು ಪರಿಗಣಿಸಿದ ಪರಿಣಾಮವಾಗಿ ಬೇರೆ ಮಡಕೆಯಿಂದ ನೀರು ಕುಡಿಯ ಬೇಕಾಯಿತು. ಈ ತಾರತಮ್ಯ ವಿರೋಧಿಸಿ ಜಗಜೀವನ್ ರಾಮ್ ಆ ಮಡಕೆಯನ್ನೇ ಒಡೆದು ಹಾಕಿದರು. ಈ ಘಟನೆಯ ಬಳಿಕ ಶಾಲೆಯಲ್ಲಿ ಪ್ರತ್ಯೇಕವಾಗಿ ಇರಿಸಿದ್ದ ಮಡಕೆ ತೆಗೆದುಹಾಕಲಾಯಿತು ಎಂದು ತಿಳಿಸಿದರು. ಜವಾಹರಲಾಲ್ ನೆಹರು ತಾತ್ಕಾಲಿಕ ಸರ್ಕಾರವನ್ನು ರಚಿಸಿದಾಗ ಜಗಜೀವನ್ ರಾಮ್ ಅದರ ಅತ್ಯಂತ ಕಿರಿಯ ಸಚಿವ ರಾಗಿದ್ದರು. ಸ್ವಾತಂತ್ರ್ಯದ ನಂತರ, ಅವರನ್ನು ದೇಶದ ಮೊದಲ ಕಾರ್ಮಿಕ ಸಚಿವರನ್ನಾಗಿ ನೇಮಿಸಲಾಯಿತು. ಅವರು ರೈಲ್ವೆ, ಆಹಾರ ಮತ್ತು ಕೃಷಿ, ಸಾರಿಗೆ ಮತ್ತು ಸಂವಹನ, ನೀರಾವರಿ ಮತ್ತು ರಕ್ಷಣೆ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ರಕ್ಷಣಾ ಸಚಿವರಾಗಿದ್ದಾಗ ಭಾರತ-ಪಾಕಿಸ್ತಾನ ಯುದ್ಧ ನಡೆಯಿತು. ತುರ್ತು ಪರಿಸ್ಥಿತಿ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರು ಭಾರತದ ಉಪ ಪ್ರಧಾನ ಮಂತ್ರಿಯೂ ಆಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್ ಉಪಸ್ಥಿತರಿದ್ದರು. 5 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಡಾ. ಬಾಬು ಜಗಜೀವನ್‌ ರಾಮ್‌ ಜನ್ಮ ದಿನಾಚರಣೆ ನಡೆಯಿತು. ಸಚಿವ ಕೆ.ಜೆ. ಜಾರ್ಜ್‌, ಶಾಸಕ ಎಚ್‌.ಡಿ. ತಮ್ಮಯ್ಯ ಹಾಗೂ ಗಣ್ಯರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.