ರಟ್ಟೀಹಳ್ಳಿಯಲ್ಲಿ ಬಾಬೂಜಿ, ಡಾ. ಅಂಬೇಡ್ಕರ ಜಯಂತಿ ವಿಜೃಂಭಣೆಯ ಆಚರಣೆಗೆ ನಿರ್ಧಾರ

| Published : Mar 28 2025, 12:30 AM IST

ರಟ್ಟೀಹಳ್ಳಿಯಲ್ಲಿ ಬಾಬೂಜಿ, ಡಾ. ಅಂಬೇಡ್ಕರ ಜಯಂತಿ ವಿಜೃಂಭಣೆಯ ಆಚರಣೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಏ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.

ರಟ್ಟೀಹಳ್ಳಿ: ಡಾ. ಬಾಬು ಜಗಜೀವನರಾಂ ಅವರ 118ನೇ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅವರ 134ನೇ ಜನ್ಮದಿನವನ್ನು ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಶ್ವೇತಾ ಅಮರಾವತಿ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಏ. 5ರಂದು ಡಾ. ಬಾಬು ಜಗಜೀವನರಾಂ ಅವರ 118ನೇ ಜನ್ಮದಿನವನ್ನು ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಾಂಕೇತಿಕವಾಗಿ ಎಲ್ಲ ಮುಖಂಡರ ಒಪ್ಪಿಗೆ ಮೇರೆಗೆ ಅಂದು ಬೆಳಗ್ಗೆ 10.30ಕ್ಕೆ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.ಏ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಅಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಬಸ್‌ ನಿಲ್ದಾಣದಿಂದ ಅಂಬೇಡ್ಕರ ಭವನದವರೆಗೆ ಎಲ್ಲ ಇಲಾಖೆಯ ಅಧಿಕಾರಿಗಳು, ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಸಾಗಿ ನಂತರ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.ಏ. 5 ಮತ್ತು 14ರಂದು ಎಲ್ಲ ಸರ್ಕಾರಿ ಹಾಗೂ ಅರೆಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಲು ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಲೋಪದೋಷ ಕಂಡುಬಂದಲ್ಲಿ ಅಂತಹ ಇಲಾಖೆ ನೌಕರರ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಇಲಾಖಾವಾರು ಕಾರ್ಯಕ್ರಮಗಳ ಜವಾಬ್ದಾರಿಯನ್ನು ನೀಡಲಾಯಿತು.ಮುಖಂಡರಾದ ಹನುಮಂತಪ್ಪ ಗಾಜೇರ, ಸಿದ್ದಪ್ಪ ಹರಿಜನ, ರಾಜು ಮುಕ್ಕಣ್ಣನವರ, ಸಮಾಜ ಕಲ್ಯಾಣ ಅಧಿಕಾರಿಗಳು, ಹೆಸ್ಕಾಂ, ಪಟ್ಟಣ ಪಂಚಾಯಿತಿ, ಕಂದಾಯ, ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಕರ್ತವ್ಯಲೋಪ, ಕರ್ಜಗಿ ಪಿಡಿಒ ಅಮಾನತು

ಹಾವೇರಿ: ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ತಾಲೂಕಿನ ಕರ್ಜಗಿ ಗ್ರಾಪಂ ಪಿಡಿಒ ಈಶ್ವರಪ್ಪ ಎನ್.ಒ. ಅವರನ್ನು ಇಲಾಖೆ ಮೇಲ್ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಜಿಪಂ ಸಿಇಒ ರುಚಿ ಬಿಂದಲ್ ಆದೇಶಿಸಿದ್ದಾರೆ.

ತಾಲೂಕಿನ ಕರ್ಜಗಿ ಗ್ರಾಪಂ ಪಿಡಿಒ ಈಶ್ವರಪ್ಪ ಎನ್.ಒ. ಅವರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ಠರಾವು ಪುಸ್ತಕದಲ್ಲಿ ಸಹಿ ಮಾಡದೇ ಇರುವುದು, ಸಭೆ ನಡೆದ ಕುರಿತು ಸಮಗ್ರ ದಾಖಲೆಗಳನ್ನು ನಿರ್ವಹಿಸದೇ ಇರುವುದು, ಸಭೆಯ ಮಾಹಿತಿಯನ್ನು ತಾಪಂ ಇಒ ಅವರಿಗೆ ಸಲ್ಲಿಸದೇ ಇರುವುದು ಹಾಗೂ 2024ರ ಆ. 18ರಂದು ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಪಂ ಸದಸ್ಯರ ಗೌರವಧನ ಎಂದು ನೀಡಿದ್ದ ಅನುದಾನವನ್ನು ಕಚೇರಿ ವೆಚ್ಚಕ್ಕೆ ಬಳಕೆ ಮಾಡಿಕೊಂಡಿರುವುದು, ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶೇಕಡಾವಾರು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಆಡಿಯೋ ಮತ್ತು ವಿಡಿಯೋಗಳು ಲಭ್ಯವಾಗಿವೆ. ಅಲ್ಲದೇ ಗ್ರಾಪಂನ 15ನೇ ಹಣಕಾಸಿನ ಅಡಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಬಿಲ್ಲು ಪಾವತಿಗೆ ಫೋನ್ ಪೇ ಮೂಲಕ ಲಂಚ ಪಡೆದ ದಾಖಲೆಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಪಿಡಿಒ ಈಶ್ವರಪ್ಪ ಎನ್.ಒ. ಅವರನ್ನು ಇಲಾಖೆ ಮೇಲ್ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ.