ಕನ್ನಡಪ್ರಭ ವಾರ್ತೆ ತಿಪಟೂರು
ಭಾರತದ ಉಪಪ್ರಧಾನಿಯಾಗಿದ್ದ ಬಾಬು ಜಗಜೀವನರಾಮ್ ದೀನದಲಿತರು, ಕಾರ್ಮಿಕರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿರುವುದಲ್ಲದೆ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರರಾಗಿ ಪ್ರಸಿದ್ಧಿ ಪಡೆದಿದ್ದರು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಡಾ. ಬಾಬು ಜಗಜೀವನರಾಮ್ ಅವರ ೧೧೯ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಬು ಜಗಜೀವನರಾಮ್ ಚಿಕ್ಕ ವಯಸ್ಸಿನಲ್ಲಿಯೇ ಅನ್ಯಾಯ, ಶೋ?ಣೆ, ಅಸಮಾನತೆ, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುವ ಗುಣಗಳನ್ನು ಬೆಳೆಸಿಕೊಂಡಿದ್ದರು. ಜನರ ನಡುವಿನ ತಾರತಮ್ಯವನ್ನು ಹೋಗಲಾಡಿಸಿ ಶೋಷಿತರ ಬಾಳಿಗೆ ಅವರು ಬೆಳಕಾಗಿದ್ದರು ಎಂದರು.ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೆ ಹೋರಾಟದ ಮೂಲಕ ನ್ಯಾಯವನ್ನು ಒದಗಿಸಿಕೊಟ್ಟವರು ಜಗಜೀವನರಾಮ್. ನೆಹರು, ಲಾಲ್ ಬಹದ್ದೂರುಶಾಸ್ತ್ರಿ, ಗಾಂಧೀಜಿ ಅವರ ಜೊತೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿಕೊಂಡರು. ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತುಕೊಟ್ಟು, ಆಳವಾಗಿ ಅಧ್ಯಯನ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿ ಉಪ ಪ್ರಧಾನಿಯಾಗಿ ಉತ್ತಮ ಆಡಳಿತವನ್ನು ನಡೆಸಿ ಸಮಾನತೆಯ ಹರಿಕಾರರಾದರು ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ. ಮಾತನಾಡಿ ಬಾಬು ಜಗಜೀವನರಾಂ ದೇಶದ ಅತಿ ಕಿರಿಯ ಸಚಿವರಾಗಿ ಕೆಸ ನಿರ್ವಹಿಸಿದರು. ಪಾಕ್ ವಿರುದ್ದದ ಯುದ್ದದಲ್ಲಿ ಅವರು ದೇಶದ ರಕ್ಷಣಾ ಸಚಿವರಾಗಿ ಸಮರ್ಪಕವಾಗಿ ಕೆಲಸ ಮಾಡಿದರು. ಗ್ರಾಮೀಣ ಕುಟುಂಬದಲ್ಲಿ ಜನಿಸಿದರೂ ತಮಗೆ ದೊರೆತ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡ ಅವರು ದೇಶಕ್ಕೆ ಅಮೂಲ್ಯ ರತ್ನವಾಗಿ ಸಿಕ್ಕರು. ಸಮಾನತೆಯ ಹರಿಕಾರರಾದ ಬಾಬು ಜಗಜೀವನರಾಮ್ ನೆನಪಿಗೆ ಸರಕಾರ ಈ ದಿನವನ್ನು ಸಮತಾ ದಿವಸ್ ಎಂದು ಘೋಷಿಸಿದೆ. ನಾವು ಕೂಡ ನಮ್ಮ ಸುರಕ್ಷಿತ ವಲಯದಿಂದ ಹೊರಬಂದು ಸಮಾಜಕ್ಕೆ ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂದು ಯೋಚಿಸಬೇಕು. ಅವರ ಆದರ್ಶಗಳನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕು ಎಂದರು.ಉಪನ್ಯಾಸ ನೀಡಿದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲರಾದ ರೇಣುಕಯ್ಯ ಮಾತನಾಡಿ ಬಾಬು ಜಗಜೀವನರಾಮ್ ಹಾಗೂ ಅಂಬೇಡ್ಕರ್ ದೇಶದ ಎರಡು ರತ್ನಗಳು. ೧೯೦೮ರ ಏಪ್ರಿಲ್ ೫ರಂದು ಜನಿಸಿದ ಜಗಜೀವನರಾಮ್‌ರ ಬಾಲ್ಯದ ಜೀವನದಲ್ಲಿ ಉಂಟಾದ ಶೋಷಣೆಯಿಂದ ನೊಂದು ಅಸಮಾನತೆಯನ್ನು ತೊಡೆದು ಹಾಕುವ ಪಣತೊಟ್ಟರು. ಒಂದೇ ಕ್ಷೇತ್ರದಿಂದ ೨೩ಬಾರಿ ಜಯಗಳಿಸಿದ ಅವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಅನೇಕ ಸುಧಾರಣೆಗಳನ್ನು ತಂದರು. ಅಂಚೆ ಇಲಾಖೆಗೆ ಯೂನಿಫಾರಂ, ಅಂಚೆಯಣ್ಣನಿಗೆ ಸೈಕಲ್ ಕೊಟ್ಟರು. ರೈಲ್ವೆ ಮಂತ್ರಿಯಾಗಿ ಕೆಲಸ ಮಾಡಿದರು, ಹಸಿರು ಕ್ರಾಂತಿಯ ಹರಿಕಾರನಾಗಿ ಪ್ರಾಮಾಣಿಕ ಪ್ರವರ್ತಕ ಎಂದು ಗಾಂಧೀಜಿಯವರಿಂದ ಪ್ರಶಂಸೆ ಪಡೆದರು ಎಂದರು.ತಹಸೀಲ್ದಾರ್ ಮೋಹನ್‌ಕುಮಾರ್.ಜಿ.ವಿ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್.ಎಚ್.ಎಂ., ಗ್ರೇಡ್೨ ತಹಸೀಲ್ದಾರ್ ಜಗನ್ನಾಥ್, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿ ತ್ರಿವೇಣಿ, ಸಿಡಿಪಿಓ ದೀಪಾ ಹೆಬ್ಬಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.