ಕನ್ನಡಪ್ರಭ ವಾರ್ತೆ ಬೆಳಗಾವಿ
ಇತಿಹಾಸ ಮಹಾನ್ ವ್ಯಕ್ತಿಗಳನ್ನು ನೇಮಿಸುತ್ತದೆ. ಆದರೆ, ಸಮಯ ಕೆಲವೇ ಕೆಲವು ವ್ಯಕ್ತಿಗಳನ್ನು ನೆನಪಿಸುತ್ತದೆ. ಅಂತವರಲ್ಲಿ ಡಾ.ಬಾಬು ಜಗಜೀವನ್ ರಾಂ ಒಬ್ಬರು ಎಂದು ಉಪನ್ಯಾಸಕ ಡಾ.ಸಂಜೀವ ತಳವಾರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆಯ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಂಗಮೇಶ್ವರ ನಗರದ ಡಾ.ಬಾಬು ಜಗಜೀವನ್ ರಾಮ್ ಉದ್ಯಾನವನದಲ್ಲಿ ನಡೆದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ಜಯಂತ್ಯುತ್ಸವ-2026 ದಲ್ಲಿ ಅವರು ಮಾತನಾಡಿದರು. ಆಹಾರ ಭದ್ರತೆ ದೇಶದ ಭದ್ರತೆ ಎಂದು ಸಂದೇಶ ನೀಡಿ ಹಗಲಿರುಳು ದುಡಿದ ದಿಮಂತ ನಾಯಕ ಡಾ. ಬಾಬು ಜಗಜೀವನ್ ರಾಮ್ ಎಂದರು.
ಜಾತಿ ಪದ್ದತಿಯನ್ನು ಚಿಕ್ಕವಯಸಿನಲ್ಲಿ ವಿರೋಧಿಸಿ ಸಮಾಜದಲ್ಲಿನ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಉಪ ಪ್ರಧಾನಿಯಾದರೂ, ಜಾತಿ ಆಧಾರಿತವಾದ ಶುಲ್ಕವನ್ನು ವಿರೋಧಿಸಿ ಅರ್ಹತೆ ಆಧಾರದ ಮೇಲೆ ಶುಲ್ಕ ನೀಡಿ ಎಂದ ಮಹನೀಯರು ಡಾ.ಬಾಬು ಜಗಜೀವನ್ ರಾಮ್. ಕೋಟ್ಯಂತರ ಬಡ ಜನರ ಜೀವನವನ್ನು ಬದಲಾಯಿಸಿ, ಒಂದು ಕಾಲದಲ್ಲಿ ಕುಡಿಯಲು ನೀರು ಕೊಡದಂತಹ ವ್ಯಕ್ತಿ ಮುಂದೆ ಹಸಿರು ಕ್ರಾಂತಿ ಹರಿಕಾರ, ರಕ್ಷಣೆ ಇಲ್ಲದ ವ್ಯವಸ್ಥೆ ಇದ್ದರೂ ಸಹ ರಕ್ಷಣಾ ಸಚಿವರು ಆದಂತಹ ಮಹಾನ್ ವ್ಯಕ್ತಿ ಡಾ.ಬಾಬು ಜಗಜೀವನ್ ರಾಮ್ ಎಂದು ಸ್ಮರಿಸಿದರು.ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಮಾತನಾಡಿ, ಜಗಜೀವನ ರಾಮ್ ಎಲ್ಲಾ ಯುವಕರಿಗೆ ಸ್ಪೂರ್ತಿಯಾಗಲಿ ಎಲ್ಲರೂ ನನ್ನವರು, ಸಮಾನತೆ, ಸಮಭಾವ ಎಂಬ ಭಾವನೆಯಿಂದ ನಾವು ಬದುಕಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ದೇಶ ಕಂಡ ಅಪ್ರತಿಮ ನಾಯಕರಲ್ಲಿ ಜಗಜೀವನ್ ರಾಮ್ ಒಬ್ಬರು. ಕಾರ್ಮಿಕರಿಗೆ ಅನೇಕ ಕಾನೂನುಗಳನ್ನೂ ಜಾರಿಗೆ ತಂದರು. ಸಮಸ್ಯೆ ಹೇಳುವರು ನಾಯಕರಲ್ಲ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿಗಳು ನಾಯಕರಾಗುತ್ತಾರೆ. ಬಾಬು ಜಗಜೀವನ ರಾಮ್ ಟಾಸ್ಕ್ ಮಾಸ್ಟರ್. ದೇಶದ ಪ್ರತಿ ಸಮಸ್ಯೆ ಪರಿಹರಿಸುವರಲ್ಲಿ ನಿಂತವರು, ಆಹಾರದ ಕೊರತೆಯನ್ನು ಹೋಗಲಾಡಿಸಿ ಬೇರೆ ದೇಶಗಳಿಗೆ ರಫ್ತು ಮಾಡುವಷ್ಟು ಬೆಳೆಸಿರುವುದಕ್ಕೆ ಕಾರಣ ಬಾಬುಜಿಯವರು. ದೇಶ ಕಷ್ಟದಲ್ಲಿ ಇದಾಗ ಗಟ್ಟಿಯಾಗಿ ನಿಂತವರು ಬಾಬುಜಿ ಎಂದು ಸ್ಮರಿಸಿದರು.
ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ್ ಮಾತನಾಡಿ, ಆಡಳಿತ ಎಂದರೆ ಅಧಿಕಾರ ಬಯಸುವುದಲ್ಲ. ಅದರಿಂದ ಎಷ್ಟು ಜನರಿಗೆ ಅನುಕೂಲ ಮಾಡಿದ್ದೀವಿ ಎಂಬುದು ಮುಖ್ಯ. ಜಗಜೀವನ ರಾಮ್ ಅವರ ಜೀವನವು ಸಾಮಾಜಿಕ ವ್ಯವಸ್ಥೆಗೆ ಅಡಿಪಾಯ, ಅವರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಶುರಾಮ ವಗ್ಗನವರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯನವರ, ರಾಜ್ಯ ನೌಕರ ಸಂಘದ ಅಧ್ಯಕ್ಷ ರಾಯಪ್ಪಗೋಳ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರು, ಸಮಾಜದ ಮುಖಂಡರಾದ ಭೀಮರಾವ್ ಪವಾರ್, ಮಲ್ಲೇಶ ಚೌಗಲಾ, ಮಹಾದೇವ ತಳವಾರ, ಭಾವಕಣ್ಣ ಭಂಗ್ಯಾಗೋಳ, ಸಿದ್ರಾಯಿ ಮೇತ್ರಿ, ಲಕ್ಷ್ಮಣ್ ಲಗಮಪ್ಪಗೋಳ, ಬಸವರಾಜ ಅರವಳ್ಳಿ, ಮಹಾದೇವ ಪೋಲ್, ಬಸವರಾಜ ರಾಯವಾಗೋಲ್, ಸುಧೀರ ಚೌಗಲೆ, ಸಂದೀಪ ಕೋಲಕಾರ, ಹಿರಲಾಳ ಚೌಹಾಣ್, ಜೀವನ್ ಕುರಾನೆ, ಸಾರ್ವಜನಿಕರು ಉಪಸ್ಥಿತರಿದ್ದರು.ಭಾವಚಿತ್ರದ ಮೆರವಣಿಗೆ:
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಾಬೂಜಿ ಭಾವಚಿತ್ರಕ್ಕೆ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಡಿ.ಸಿ.ಪಿ.ಶ್ರವಣ ನಾಯಕ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಇದ್ದರು. ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಗರದ ಡಾ.ಬಾಬು ಜಗಜೀವನರಾಮ್ ಉದ್ಯಾನವನಕ್ಕೆ ಬಂದು ಮುಕ್ತಾಯಗೊಂಡಿತು.