ಜಿಲ್ಲಾಡಳಿತದಿಂದ ಬಾಬು ಜಗಜೀವನರಾಂ ಜಯಂತಿ ಆಚರಣೆ । ಸನ್ನಡತೆಯ ರಾಜಕಾರಣಿ: ಬಣ್ಣನೆ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಡಾ. ಬಾಬೂ ಜಗಜೀವನ್ ರಾಂ ಅವರ ಚಿಂತನೆಗಳು ದೇಶದ ಜನರ ಪರವಾಗಿದ್ದು, ಜನರಿಗೆ ಸಮಾನತೆಯನ್ನು ದೊರಕಿಸಿಕೊಡುವುದೇ ಅವರ ಚಿಂತನೆಗಳ ಮೂಲ ಉದ್ದೇಶವಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಪೇಟೆ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಆಯೊಜಿಸಿದ್ದ ಹಸಿರು ಡಾ. ಬಾಬು ಜಗಜೀವನ ರಾಂರವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಹಳ ಸುದೀರ್ಘ ಅವಧಿಯಲ್ಲಿ ರಾಷ್ಟ್ರದ ಸೇವೆಯಲ್ಲಿದ್ದ ಡಾ. ಬಾಬೂಜೀ ಅವರು ಜೀವನದುದ್ದಕ್ಕೂ ಸಾಮಾಜಿಕ ಅಭಿವೃದ್ಧಿ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1908ರಲ್ಲಿ ಬಿಹಾರ ರಾಜ್ಯದ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ಥಿತಿಗತಿ, ಸಮಾಜದ ಏರು-ಪೇರುಗಳನ್ನು ಅವಲೋಕಿಸುತ್ತಿದ್ದರು. ಸ್ವಾತಂತ್ರ್ಯ ನಂತರ ದೇಶದ ಜನರನ್ನು ಒಗ್ಗೂಡಿಸಿ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದರು. ಅವರ ಆದರ್ಶಗಳು, ಮಾರ್ಗದರ್ಶನಗಳನ್ನು ನಾವು ಅನುಸರಿಸಬೇಕು. ಅವರನ್ನು ಸ್ಮರಿಸಬೇಕು ಎಂದರು.


ಬ್ರಿಟಿಷರ ಆಡಳಿತದಲ್ಲಿ ದೇಶದ ಜನಜೀವನ, ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಇದನ್ನು ಮನಗಂಡಿದ್ದ ಬಾಬೂಜೀ ಕಾರ್ಮಿಕರ ಕಲ್ಯಾಣಕ್ಕಾಗಿ ಸಮಾನವೇತನ ಕಾಯ್ದೆ ಜಾರಿಗೊಳಿಸಿದರು. 45ರಿಂದ 50 ವರ್ಷಗಳ ಕಾಲ ರಾಜಕಾರಣಿಯಾಗಿದ್ದ ಬಾಬೂಜೀ ಕೃಷಿ, ರಕ್ಷಣೆ, ರೈಲ್ವೆ, ಕಾರ್ಮಿಕ, ಆಹಾರ ಸೇರಿದಂತೆ ವಿವಿಧ ಖಾತೆಗಳ ಮಂತ್ರಿಗಳಾಗಿ ದೇಶವನ್ನು ಮುನ್ನೆಡೆಸಿದರು. ದೇಶದಲ್ಲಿ ಬರಗಾಲ ಎದುರಾದ ಸಂದರ್ಭದಲ್ಲಿ ಕೃಷಿ ಸಚಿವರಾಗಿದ್ದ ಅವರು ಹಸಿರು ಕ್ರಾಂತಿಯ ಮೂಲಕ ಮಾದರಿ ಬೆಳೆ ಬೆಳೆದು ದೇಶ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾದರು ಎಂದು ಅವರು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಂ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಎಚ್.ಆರ್‌. ಭೀಮಾಶಂಕರ್‌ ಅವರು ಮಾತನಾಡಿ, ವಿದ್ಯಾರ್ಥಿಜೀವನದಲ್ಲಿ ಅಪಾರ ಪ್ರತಿಭಾವಂತರಾಗಿದ್ದ ಬಾಬೂಜೀಯವರು ಬಡವರು, ದಲಿತರು, ಶೋಷಿತರು, ತುಳಿತಕ್ಕೊಳಗಾದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಬಡವರು, ಶೋಷಿತರ ಸಂಘಟಿಸಿ ಸಮಾನತೆಗಾಗಿ ಹೋರಾಡಿದರು. 37ನೇ ವಯಸ್ಸಿಗೆ ಸಂವಿಧಾನ ರಚನೆ ಸಮಿತಿ ಸದಸ್ಯರಾಗಿದ್ದ ಬಾಬೂಜೀಯವರು ಸಂಸತ್‌ನಲ್ಲಿ ಹತ್ತು-ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ದೇಶ ಪ್ರಗತಿ ಸಾಧಿಸಲು ಶ್ರಮಿಸಿದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪಾ, ಭಾರತೀಯ ಇತಿಹಾಸದ ಪ್ರಮುಖವಾದ ಬಾಬೂಜೀಯವರ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಬಾಬೂಜೀ ಕೇವಲ ರಾಜಕಾರಣಿಯಲ್ಲ, ಅವರು ನವಭಾರತದ ನಿರ್ಮಾತೃ ಆಗಿದ್ದಾರೆ. ಸಾಮಾಜಿಕ ಅಸಮಾನತೆ, ಅಶ್ಪೃಷ್ಯತೆ ವಿರುದ್ಧ ಹೋರಾಡಿದ ಮಹಾನ್ ಚೇತನ ಎಂದರೇ ತಪ್ಪಾಗಲಾರದು. ಬಾಬೂಜಿ ಅವರು ಉಪಪ್ರಧಾನಿಯಾಗಿ ದೇಶದ ಆಡಳಿತದ ದೊಡ್ಡ ಶಕ್ತಿಯಾಗಿ ನಾಡಿಗೆ ಸ್ಫೂರ್ತಿದಾಯಕ ಕೊಡುಗೆ ನೀಡಿದ್ದಾರೆ ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್‌, ಜಿಲ್ಲಾ ಪಂಚಾಯ್ತಿ ಸಿಇಓ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.---

5ಸಿಎಚ್‌ಎನ್‌54

ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಇತರೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

-----------------5ಸಿಎಚ್‌ಎನ್‌52

ಚಾಮರಾಜನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಆಯೊಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್‌ರವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಉದ್ಘಾಟಿಸಿದರು.

---------------