ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಬೇಬಿ ಬೆಟ್ಟದ ಭಾರೀ ದನಗಳ ಜಾತ್ರೆ ಫೆ.26 ರಿಂದ ಆರಂಭಗೊಂಡು ಮಾ.5ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ತಿಳಿಸಿದರು.ತಾಲೂಕಿನ ಬೇಬಿ ಮಠದ ಆವರಣದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಅರಸರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವ ಆಚರಣೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ವಿಶೇಷ ಒತ್ತು ನೀಡಿ ಜಾತ್ರೆ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ ಎಂದರು.
ಜಾತ್ರೆಗೆ ಆಗಮಿಸುವ ಜನ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಹಾರ, ಚಿಕಿತ್ಸೆ, ವಿದ್ಯುತ್ ಸಂಪರ್ಕ ಸೇರಿ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಜಾತ್ರಾ ಮಹೋತ್ಸವ ಪಕ್ಷಾತೀತವಾಗಿ ನಡೆಯುತ್ತಿದೆ. ಎಲ್ಲಾ ಪಕ್ಷದವರೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ದನಗಳು ಆಗಮಿಸುತ್ತಿವೆ. ಆಯ್ಕೆಯಾದ ಉತ್ತಮ ರಾಸುಗಳ ಪ್ರತಿ ವಿಭಾಗಕ್ಕೂ 10 ಚಿನ್ನದ ಬಹುಮಾನ ನೀಡಲಾಗುತ್ತಿದೆ ಎಂದು ಹೇಳಿದರು.
ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್ ಮಾತನಾಡಿ, ಸರ್ಕಾರದ 32 ಇಲಾಖೆಗಳು ಮತ್ತು ಸ್ಥಳೀಯ 8 ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಜಾತ್ರೆ ಯಶಸ್ಸಿಗೆ ಶ್ರಮಿಸಲಾಗುತ್ತಿದೆ. ಜಾತ್ರೆಗೆ ವಿವಿಧ ಪಕ್ಷದ ಮುಖಂಡರನ್ನು ಅಹ್ವಾನಿಸಲಾಗಿದೆ. ಜಾತ್ರೆ ಪಕ್ಷಾತೀತವಾಗಿರಲಿದೆ ಎಂದರು.ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್ ಮಾತನಾಡಿ, ನಾಳೆಯಿಂದ ನಡೆಯುವ ಜಾತ್ರಾ ಮಹೋತ್ಸವದ ಎಲ್ಲಾ ಸಾಂಸ್ಕೃತಿಕ, ಕ್ರೀಡೆ ಮತ್ತು ವೇದಿಕೆ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಶ್ರೀ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಮತ್ತು ಶ್ರೀ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಫೆ.26 ರಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಸುನೀತಾ ಪುಟ್ಟಣ್ಣಯ್ಯ ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅಂದು ಸಂಜೆ ಕೆನ್ನಾಳು ಗ್ರಾಮದ ವೀರ ಮದಕರಿ ನಾಯಕರ ಯುವಕರ ಸಂಘದಿಂದ ದೊಣ್ಣೆವರಸೆ ಮತ್ತು ಬೆಂಕಿವರಸೆ ಹಾಗೂ ಶ್ರೀರಾಮ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.ಫೆ.27 ರಂದು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಿವಾರ ಉಮೇಶ್ ಅವರಿಂದ ಗಾನ ಮಂಜರಿ, ಫೆ.28 ರಂದು ವಾಲಿಬಾಲ್ ಪಂದ್ಯಾವಳಿ ಮತ್ತು ಕು.ಚಾಂದಿನಿ ಅವರಿಂದ ಭರತನಾಟ್ಯ, ರಾಗಿಮುದ್ದನಹಳ್ಳಿ ಗ್ರಾಮಸ್ಥರಿಂದ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಮಾ.1 ರಂದು ಮಹಿಳಾ ಕ್ರೀಡಾಕೂಟ ಮತ್ತು ಕಲಾಧಾರ ಸ್ಕೂಲ್ ಆಫ್ ಡ್ಯಾನ್ಸ್ ಅವರಿಂದ ಭರತ ನಾಟ್ಯ, ಸರ್ಕಾರಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಮಾ.2 ರಂದು ನಡೆಯುವ ಸರಳ ಸಾಮೂಹಿಕ ವಿವಾಹದಲ್ಲಿ 30 ಜೋಡಿಗಳು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದಸ್ವಾಮೀಜಿ, ಜಿಲ್ಲಾ ಉಸ್ತುವಾರಿ, ಕೃಷಿ ಸಚಿವ ಚಲುವರಾಯಸ್ವಾಮಿ, ಮೈಸೂರು- ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್ ಭಾಗವಹಿಸುವರು ಎಂದರು.ಚಿತ್ರನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಮಾಂಗಲ್ಯ ವಿತರಣೆ ಮಾಡಲಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ವರನಿಗೆ ಪಂಚೆ, ಶರ್ಟ್, ನಟ ಧನ್ವೀರ್ ವರನಿಗೆ ಕೈಗಡಿಯಾರ, ದುಬೈನ ರೋಹಿತ್ ವಧುವಿಗೆ ಧಾರೆ ಸೀರೆ, ಉದ್ಯಮಿ ಮೋಹನ್ ರಾಜ್ ಅವರು ವಧುವಿಗೆ ಕಾಲ್ಗೆಜ್ಜೆ, ಕಾಲುಂಗರವನ್ನು ತಮ್ಮ ಸ್ವತಃ ಖರ್ಚಿನಲ್ಲಿ ನೀಡಲಿದ್ದಾರೆ. ಅಂದು ಸಂಜೆ ಮಡೆನೂರು ಮನು ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಮಾ.3 ರಂದು ಕಬಡ್ಡಿ ಪಂದ್ಯಾವಳಿ ಮತ್ತು ಸರ್ಕಾರಿ ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮಾ.4 ರಂದು ರಥೋತ್ಸವ ಹಾಗೂ ತಂಬೂರಿ ಸಿದ್ದರಾಜು ತಂಡದಿಂದ ಮಂಟೇಸ್ವಾಮಿ ಜಾನಪದ ಗಾಯನ ಕಾರ್ಯಕ್ರಮ ನಡೆಯಲಿದೆ. ಮಾ.5 ರಂದು ಉತ್ತಮ ರಾಸುಗಳ ಆಯ್ಕೆ ಮತ್ತು ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಾಗಾನಹಳ್ಳಿ ಕೃಷ್ಣೇಗೌಡ, ರೈತಸಂಘ ಮುಖಂಡರಾದ ರಾಘವ ಪ್ರಕಾಶ, ಷಡಾಕ್ಷರಿ, ಚಿಕ್ಕಾಡೆ ವಿಜೇಂದ್ರ, ಪುಟ್ಟೇಗೌಡ,ಡಿಂಕಾ ದೇವರಾಜು ಇತರರು ಇದ್ದರು.