ಮೊಲದ ಮರಿ ಸಾಗಣೆ; ನಾಲ್ವರ ಬಂಧನ

| Published : Jan 23 2025, 12:46 AM IST

ಸಾರಾಂಶ

ಮೊಲದ ಮರಿ ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ: ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಭೇಟಿಯಾಡಿ ಕೊಂದು ಮೊಲದ ಮರಿಯನ್ನು ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಇಲ್ಲಿನ ಪೊಲೀಸರು ಬಂಧಿಸಿ, ಒಂದು ನಾಡಬಂದೂಕನ್ನು ಜಪ್ತಿ ಮಾಡಿದ್ದಾರೆ.

ದೊಡ್ಡಿಂದುವಾಡಿ ಗ್ರಾಮದ ಕೆಂಪರಾಜು (31), ಸುಂದರ (29), ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಮುನಿಲಿಂಗೇಗೌಡ (38) ಹಾಗೂ ತಿಗಳರ ಹೊಸರಹಳ್ಳಿ ಹುಲಿಚನ್ನಯ್ಯ (34) ಬಂಧಿತರು. ಆರೋಪಿಗಳಿಂದ ಒಂದು ನಾಡಬಂದೂಕು, ಬಂದೂಕಿನ ಪರಿಕರಗಳು, ಸಾಗಾಣಿಕೆ ಬಳಸಿದ್ದ ಬೈಕ್ ಹಾಗೂ ಭೇಟಿಯಾಡಿದ್ದ ಮೊಲದ ಮರಿಯನ್ನು ಜಪ್ತಿ ಮಾಡಲಾಗಿದೆ.

ದೊಡ್ಡಿಂದುವಾಡಿ ಹಾಗೂ ಇಕ್ಕಡಹಳ್ಳಿ ಗ್ರಾಮದ ಸಮೀಪದ ಮುಡಲಗುಡ್ಡದ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ನಾಡಬಂದೂಕಿನೊಂದಿಗೆ ಅಕ್ರಮವಾಗಿ ಒಳನುಗ್ಗಿ ಕಾಡು ಪ್ರಾಣಿ, ಮೊಲದ ಮರಿಯನ್ನು ಭೇಟಿಯಾಡಿ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವಾಗ ದೊಡ್ಡಿಂದುವಾಡಿ ಚಾನಲ್ ರಸ್ತೆ ಬಳಿ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಅಪರಾಧ ಪತ್ತೆದಳದ ಸಿಬ್ಬಂದಿ ಎಎಸ್ಐ ತಖೀಉಲ್ಲಾ, ಮುಖ್ಯಪೇದೆಗಳಾದ ರವಿ, ವೆಂಕಟೇಶ, ಪೇದೆಗಳಾದ ಬಿಳಿಗೌಡ, ಶಿವಕುಮಾರ, ಹಾಗೂ ಸಿಪಿಐ ಕಚೇರಿಯ ಎಚ್.ಸಿ.ಗುರುಲಿಂಗಶೆಟ್ಟಿ, ಉಮಾಶಂಕರ್, ಸ್ವಾಮಿ ಇದ್ದರು.