ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಐತಿಹಾಸಿಕ, ಪುರಾಣ ಪ್ರಸಿದ್ಧ ಬೇಬಿಬೆಟ್ಟದ ಭಾರೀ ದನಗಳ ಜಾತ್ರಾ ಮಹೋತ್ಸವ ಫೆ.26ರಿಂದ ಮಾ.4ರವರೆಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಬೇಬಿಬೆಟ್ಟದ ಶ್ರೀ ರಾಮಯೋಗಿಶ್ವರ ಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದನಗಳ ಜಾತ್ರೆಯನ್ನು ಯಾವುದೇ ಕೊರತೆ ಎದುರಾಗದಂತೆ ಆಚರಣೆ ಮಾಡಲಾಗುವುದು ಎಂದರು.
ಜಾತ್ರೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾತ್ರೆಗೆ ಆಗಮಿಸುವ ಜನ- ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಸ್ವಚ್ಛತೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಜಾತ್ರೆ ಪ್ರಯುಕ್ತ ರೈತರಿಗೆ ಉಪಯುಕ್ತವಾಗುವ ರೀತಿಯಲ್ಲಿ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಆಯೋಜಿಸುವ ಮೂಲಕ ರೈತರಿಗೆ ಹೆಚ್ಚು ಮಾಹಿತಿ ನೀಡಬೇಕು. ಜತೆಗೆ ಕ್ರೀಡೆ, ಆರೋಗ್ಯ ತಪಾಸಣೆ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಮಾ.2ರಂದು ಉಚಿತ ಸಾಮೂಹಿಕ ವಿವಾಹ:ಜಾತ್ರೆ ಪ್ರಯುಕ್ತ ಮಾ.2ರಂದು ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಕಳೆದ ಬಾರಿ ಕೇವಲ 17 ಜೋಡಿ ವಿವಾಹವಾಗಿತ್ತು. ಈ ಬಾರಿ ಹೆಚ್ಚು ಜೋಡಿಗಳು ಸರಳ ವಿವಾಹ ಕಾರ್ಯಕ್ರಮಕ್ಕೆ ಹೆಸರು ನೋಂದಾವಣೆ ಮಾಡುವಂತೆ ಅಧಿಕಾರಿಗಳು ವ್ಯಾಪಾಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮಾ.4ರಂದು ಜಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ. ಅಂದೇ ಉತ್ತಮ ರಾಸುಗಳಿಗೆ ಚಿನ್ನವನ್ನು ಬಹುಮಾನವನ್ನಾಗಿ ವಿತರಿಸಲಾಗುವುದು. ಮಾ.3ರಂದು ಸಿದ್ಧೇಶ್ವರ, ಮಾದೇಶ್ವರ ಸ್ವಾಮಿ ರಥೋತ್ಸವ ನಡೆಸಲಾಗುವುದು ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಬೇಬಿ ಬೆಟ್ಟದಲ್ಲಿ ಭಾರೀ ದನಗಳ ಜಾತ್ರೆಯನ್ನು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಹೀಗಾಗಿ ಅಧಿಕಾರಿಗಳು ಖುದ್ದು ಹಾಜರಿದ್ದು ಜಾತ್ರೆಯ ಯಶಸ್ವಿಗೆ ಶ್ರಮಿಸಬೇಕು ಎಂದರು.
ಚಿರತೆ ಹಾವಳಿ ತಡೆಗಟ್ಟಿ:ತಾಲೂಕಿನ ಬೇಬಿ ಬೆಟ್ಟದಲ್ಲಿ ಇತ್ತೀಚಿನ ದಿನಗಳ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳು ಬೇಬಿ ಬೆಟ್ಟದಲ್ಲಿ ಬೋನಿರಿಸುವ ಮೂಲಕ ಚಿರತೆ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಸ್.ಸಂತೋಷ್, ಇಒ ಲೋಕೇಶ್ ಮೂರ್ತಿ, ಬಿಇಒ ರವಿಕುಮಾರ್, ತಾಲೂಕು ರೈತಸಂಘದ ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ, ವಿವಿಧ ಗ್ರಾಪಂಗಳ ಅಧ್ಯಕ್ಷರು, ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರಿದ್ದರು.