ಸ್ನಾತಕ ಪದವಿಯ 5-6 ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟ

| Published : Aug 01 2025, 12:30 AM IST

ಸಾರಾಂಶ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು 2024-25ನೇ ಸಾಲಿನ ಸ್ನಾತಕ ಪದವಿಯ 5ನೇ ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ.

7 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿದ ಬಳ್ಳಾರಿ ವಿಶ್ವವಿದ್ಯಾಲಯ

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು 2024-25ನೇ ಸಾಲಿನ ಸ್ನಾತಕ ಪದವಿಯ 5ನೇ ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ. ಗಮನಾರ್ಹ ಸಂಗತಿ ಎಂದರೆ ಪರೀಕ್ಷೆ ಪೂರ್ಣಗೊಂಡ 7 ದಿನಗಳಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ಇದೇ ತಿಂಗಳ 22ರಂದು ಪರೀಕ್ಷೆಗಳು ಮುಗಿದಿರುವ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಸ್ನಾತಕ ಕೋರ್ಸ್ ಗಳ ಮೌಲ್ಯಮಾಪನವನ್ನು ಕೇವಲ 7 ದಿನಗಳಲ್ಲಿ ಪೂರ್ಣಗೊಳಿಸಿ ವಿವಿಯು ಫಲಿತಾಂಶಗಳನ್ನು ಹೊರಡಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಯುಯುಸಿಎಂಎಸ್ ತಂತ್ರಾಂಶದ ಮೂಲಕ ವೀಕ್ಷಿಸಬಹುದಾಗಿದೆ.

ಈ ಮೂಲಕ ಒಟ್ಟು 12,532 ವಿದ್ಯಾರ್ಥಿಗಳ ಫಲಿತಾಂಶವನ್ನು ವಾರದೊಳಗೆ ಪ್ರಕಟಿಸಿದ ರಾಜ್ಯದ ಪ್ರಥಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ವಿಶ್ವವಿದ್ಯಾಲಯ ಆರಂಭಗೊಂಡ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಕಾಲಾವಧಿಯಲ್ಲಿ ಫಲಿತಾಂಶ ಪ್ರಕಟಿಸಿರುವುದು ವಿಶೇಷವಾಗಿದೆ.

ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿರುವ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ಮೌಲ್ಯಮಾಪಕರು ಮತ್ತು ವಿವಿ ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಕುಲಪತಿಗಳು ಅಭಿನಂದಿಸಿದ್ದಾರೆ.

ಪರೀಕ್ಷಾ ಫಲಿತಾಂಶಗಳನ್ನು ಶೀಘ್ರ ಹೊರಡಿಸುವಿಕೆಯಿಂದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ವಿದ್ಯಾರ್ಥಿ ಸ್ನೇಹಿ ಪರಿಸರ ಎಲ್ಲೆಡೆ ನಿರ್ಮಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಕುಲಪತಿ ಪ್ರೊ. ಎಂ ಮುನಿರಾಜು ತಿಳಿಸಿದ್ದಾರೆ.

ಕುಲಪತಿಗಳ ಮಾರ್ಗದರ್ಶನದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ವೇಗ ನೀಡಿದ್ದರಿಂದ ತ್ವರಿತ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ ತಿಳಿಸಿದ್ದಾರೆ. ಎಸ್‌ಬಿಐ ಎಟಿಎಂನಲ್ಲಿ ಕಳ್ಳತನ ಯತ್ನ

ಬಳ್ಳಾರಿ ನಗರದ ತಾಳೂರು ರಸ್ತೆಯ ಎಸ್‌ಬಿಐನ ಎಟಿಎಂಯನ್ನು ಧ್ವಂಸಗೊಳಿಸಿ ಕಳ್ಳತನ ಮಾಡಲು ಯತ್ನಿಸಿದ ಘಟನೆ ಬುಧವಾರ ತಡರಾತ್ರಿ ಜರುಗಿದೆ.ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯಿಂದ ಎಟಿಎಂನಿಂದ ಹಣ ತೆಗೆಯಲು ಸಾಧ್ಯವಾಗದೆ ಅಲ್ಲಿಂದ ಮರಳಿದ್ದಾನೆ. ಎಟಿಎಂನಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ.ಎಟಿಎಂನಿಂದ ಯಾವುದೇ ಹಣ ದೋಚಿಲ್ಲ. ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.