ಸಾರಾಂಶ
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಜೈಲಿನ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಬಳಿಕ ಕಾರಾಗೃಹದ ಅಧೀಕ್ಷಕಿ ಲತಾ ಸೇರಿದಂತೆ ಜೈಲಿನ ಅಧಿಕಾರಿಗಳ ಜೊತೆ ಚರ್ಚಿಸಿದರು. ಜೈಲಿನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು, ಜಾಮರ್ ಸ್ಥಿತಿಗತಿಯ ಕುರಿತು ಚರ್ಚಿಸಲಾಗಿದೆ.ನಟ ದರ್ಶನ್ ಗೆ ಎರಡು ಕೋಣೆಗಳನ್ನು ಕಾಯ್ದಿರಿಸಲಾಗಿದೆ. ದರ್ಶನ್ ಇರುವ ಬ್ಯಾರಕ್ ಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿ ನಿರಂತರ ಪರಿಶೀಲನೆ ಮಾಡಲು ಕ್ರಮ ವಹಿಸಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ದರ್ಶನ್ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್‌ನಿಂದ ವಿಚಾರಣೆ ನಡೆಸುವ ಅವಶ್ಯಕತೆಯಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಹ ನಡೆಸಲು ತಯಾರಿ ನಡೆಸಲಾಗಿದೆ.
ದರ್ಶನ್ ಇರುವ ಸೆಲ್‌ನಲ್ಲಿ ಸಾಮಾನ್ಯವಾಗಿ ಒಂದು ಫ್ಯಾನ್ ಮಾತ್ರ ಇರಲಿದೆ. ಆರೋಗ್ಯ ತೊಂದರೆ ಕಂಡು ಬಂದಲ್ಲಿ ಮಾತ್ರ ವೈದ್ಯರ ಸೂಚನೆ ಮೇರೆಗೆ ಬೆಡ್ ಸೌಲಭ್ಯ ಕಲ್ಪಿಸಲು ಅವಕಾಶವಿದೆ. "ನಟ ದರ್ಶನ್ ಬಳ್ಳಾರಿ ಕಾರಾಗೃಹಕ್ಕೆ ಬರುತ್ತಿದ್ದಂತೆಯೇ ಅವರನ್ನು ಪ್ರತ್ಯೇಕ ಕೋಣೆಯಲ್ಲಿ (ಬ್ಯಾರಕ್ ಸಂಖ್ಯೆ 15) ರಲ್ಲಿ ಇಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹೆಚ್ಚಿನ ಭದ್ರತೆಗಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಬಳ್ಳಾರಿ ಜೈಲಿಗೆ ಈಗಾಗಲೇ ಅಗತ್ಯ ಭದ್ರತೆಯಿದ್ದು ಪೊಲೀಸರು ತಮ್ಮ ವ್ಯಾಪ್ತಿಯ ಭದ್ರತೆ ಕಾರ್ಯ ಕೈಗೊಳ್ಳುವರು ಎಂದು ಎಸ್ಪಿ ಡಾ.ಶೋಭಾರಾಣಿ ಮಾಧ್ಯಮಗಳಿಗೆ ತಿಳಿಸಿದರು.
ಅಭಿಮಾನಿಗಳಿಗೆ ನಿರಾಸೆ:
ಬುಧವಾರವೇ ದರ್ಶನ್ ಬರುವ ಸಾಧ್ಯತೆ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜೈಲಿನ ಹೊರ ಭಾಗದಲ್ಲಿ ಜಮೆಯಾಗಿದ್ದರು. ಪೊಲೀಸರು ಅವರನ್ನು ಚದುರಿಸಲು ಕ್ರಮ ಕೈಗೊಳ್ಳುತ್ತಿದ್ದರೂ ಸಹ ಆಗಾಗ ಅವರು ಸೇರುತ್ತಿದ್ದರು. ಜೈಲಿನ ಸುತ್ತಮುತ್ತ ಅಭಿಮಾನಿಗಳು ರಾತ್ರಿಯ ವರೆಗೂ ಕಾದು ಕುಳಿತಿದ್ದರು. ಆದರೆ ದರ್ಶನ ಇಂದು ಬರುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಹ ಅಲ್ಲಿಂದ ವಾಪಸ್ ತೆರಳಿದರು.
ದರ್ಶನ್ ಗುರುವಾರ ಬಳ್ಳಾರಿಗೆ ಬರುವ ಸಾಧ್ಯತೆಯಿದ್ದು, ಜೈಲಿಗೆ ತೆರಳುವ ರಸ್ತೆ ಮಾರ್ಗದ ಎರಡು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಜೈಲು ಮುಂಭಾಗದ ರಸ್ತೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರಿಸಲಾಗಿದ್ದು, ಜೈಲು ಬಳಿ ಸಾರ್ವಜನಿಕರು ವಿನಾಕಾರಣ ಓಡಾಡದಂತೆ ಕ್ರಮ ವಹಿಸಲಾಗಿದೆ.
ಇನ್ನು ಬಳ್ಳಾರಿ ಜೈಲ್‌ಗೆ ನಟ ದರ್ಶನ್ ಸ್ಥಳಾಂತರ ಹಿನ್ನೆಲೆಯಲ್ಲಿ ಜೈಲು ಸುತ್ತಮುತ್ತ ಪ್ರದೇಶದಲ್ಲಿನ ಕಾಯಿಪಲ್ಯೆ ಮಾರಾಟಗಾರರನ್ನು ಸಹ ಪೊಲೀಸರು ತೆರವುಗೊಳಿಸಿದರು.
ಜೈಲಲ್ಲಿ ಕೈದಿಗಳಿಗೆ ತಾರತಮ್ಯ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆಯುವ ಚಟುವಟಿಕೆಗಳ ಕುರಿತು ಮಾಜಿ ಕೈದಿಯೊಬ್ಬ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಮುನ್ನಲೆಗೆ ಬಂದಿದೆ. ಹಣವುಳ್ಳವರಿಗೆ ಎಲ್ಲವೂ ದಕ್ಕುತ್ತದೆ. ಬಡ ಕೈದಿಗಳಿಗೆ ಮಾತ್ರ ಜೈಲು ಸಂಕಷ್ಟ. ಉಳ್ಳವರಿಗೆ ಒಂದು, ಇಲ್ಲದವರಿಗೆ ಮತ್ತೊಂದು ನೀತಿ ಜೈಲಿನಲ್ಲಿದೆ ಎಂದು ಮಾಜಿ ಕೈದಿಯೊಬ್ಬ ಹೇಳಿದ್ದಾನೆ. ಮಾಜಿ ಕೈದಿಯ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ.
ಜೈಲಿನಲ್ಲಿ ಗಾಂಜಾ ಸಿಗುತ್ತೆ ಎನ್ನುವ ಮಾಜಿ ಕೈದಿ ಆರೋಪ ಸುಳ್ಳು ಎಂದು ಹೇಳಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಆರೋಪಿಸಿದ ವ್ಯಕ್ತಿಯನ್ನು ಕರೆದು ವಿಚಾರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.