ಜಿಲ್ಲಾಸ್ಪತ್ರೆಗೆ ಸಂಸದ ಯದುವೀರ್ ಭೇಟಿ

| Published : Jul 10 2024, 12:34 AM IST

ಸಾರಾಂಶ

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದೇನೆ. ನಮ್ಮ ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಸ್ಪತ್ರೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಮೇಟಗಳ್ಳಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆದರು. ಅಲ್ಲದೆ, ಆಸ್ಪತ್ರೆಯ ವಾರ್ಡ್ ಗಳಿಗೆ ತೆರಳಿ ಪರಿಶೀಲಿಸಿದರು.

ಈ ವೇಳೆ ಸಂಸದ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದೇನೆ. ನಮ್ಮ ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಡೆಂಘೀ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಡೆಂಘೀ ನಿಯಂತ್ರಣ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಡೆಂಘೀ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯದಲ್ಲೇ ಅಧಿಕಾರಿಗಳ ಸಭೆ ಮಾಡಲಿದ್ದೇವೆ. ಜಿಲ್ಲಾಸ್ಪತ್ರೆಗೆ ಅಗತ್ಯ ಸಲಕರಣೆಗಳ ಕೊರತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಮಾಜಿ ಶಾಸಕ ಎಲ್. ನಾಗೇಂದ್ರ ಮೊದಲಾದವರು ಇದ್ದರು. ಮೈಸೂರಿನಲ್ಲಿ ಡೆಂಘೀ ನಿಯಂತ್ರಣಕ್ಕೆ ಬರುತ್ತಿವೆ- ಜಿಲ್ಲಾ ಆರೋಗ್ಯಾಧಿಕಾರಿ

ಮೈಸೂರಿನಲ್ಲಿ ಡೆಂಘೀ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ. ಮುಖ್ಯಮಂತ್ರಿ, ಸಚಿವರ ಸೂಚನೆ ಮೇರೆಗೆ ಕ್ರಮ ಕೈಗೊಂಡಿದ್ದೇವೆ. ಇಡೀ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಮೈಸೂರಿನಲ್ಲಿ ಡೆಂಘೀ ರೋಗಿಗಳು ಬೇಗ ಗುಣಮುಖರಾಗುತ್ತಿದ್ದಾರೆ. ಡೆಂಘೀ ನಿಯಂತ್ರಣಕ್ಕೆ ಬೇಕಾದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಔಷಧಿಗಳ ಕೊರತೆ ಇಲ್ಲ. ಪ್ರಾಥಮಿಕ ಅರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಕಡೆಯೂ ಸೂಕ್ತ ಕ್ರಮ ವಹಿಸಿದ್ದೇವೆ. ಈ ವಾರದಿಂದ ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಲಕ್ಷಾಂತರ ಭಕ್ತಾಧಿಗಳು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಾರೆ. ಹಲವು ಕಡೆ ಪ್ರಸಾದ ವಿತರಣೆ ಕೂಡ ಇರುತ್ತದೆ. ಹೀಗಾಗಿ, ಎಲ್ಲಾ ಕಡೆಯೂ ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಕ ಮಾಡಿದ್ದೇವೆ. ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸರ್ವ ಸನ್ನದ್ದವಾಗಿದೆ ಎಂದು ಅವರು ಹೇಳಿದರು.

----

ಕೋಟ್...

ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿದ್ದು ನಮ್ಮ ಕರ್ತವ್ಯ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಮಾತನಾಡಬಹುದು. ಮೈಸೂರು- ಕೊಡಗು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಸಚಿವರು ಕೂಡ ಸಾಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಮೈಸೂರು- ಕೊಡಗು ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ.

- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದರು