ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ ವ್ಯಕ್ತಿಯೋರ್ವ ಸಾವಿಗೀಡಾಗಿ ವಾಂತಿಭೇದಿ ಪ್ರಕರಣ ಹೆಚ್ಚಾದ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿ ಘಟನೆಯ ಬಗ್ಗೆ ವೈದ್ಯರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಮಾಹಿತಿ ಪಡೆದರು.ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಮತ್ತು ವಾಲ್ ಗಳ ಬಳಿ ತೆರಳಿ ಪರಿಶೀಲನೆ ನಡೆಸಿ ವಾಲ್ ಗಳನ್ನು ಎತ್ತರಕ್ಕೆ ಇಟ್ಟು ಅಲ್ಲಿಗೆ ಕೊಳಚೆ ಮತ್ತು ಮಳೆ ನೀರು ಹರಿದು ಬರದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಪ್ರಯೋಗಾಲಯಕ್ಕೆ ಕಳುಹಿಸಿರುವ ನೀರಿನ ವರದಿಯು ಬಂದ ನಂತರ ಮತ್ತೊಮ್ಮೆ ಟ್ಯಾಂಕ್ ಶುದ್ಧೀಕರಿಸಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನೀರು ಕುಡಿಯಲು ಯೋಗ್ಯ ಎಂದು ವರದಿ ಬಂದ ನಂತರ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಆದೇಶಿಸಿದರು.ಅಲ್ಲಿಯವರೆಗೆ ಗ್ರಾಮದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಂಡು ಶುದ್ಧೀಕರಿಸಿದ ನೀರನ್ನು ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡುವಂತೆ ಸೂಚನೆ ನೀಡಿದ ಅವರು ಗ್ರಾಮಗಳಲ್ಲಿನ ಸ್ವಚ್ಛತೆಗೆ ಗ್ರಾಮ ಪಂಚಾಯತಿಯವರು ಪ್ರಮುಖ ಆದ್ಯತೆ ನೀಡಿ ನೈರ್ಮಲ್ಯತೆಯನ್ನು ಕಾಪಾಡಬೇಕೆಂದರು. ನೋಟೀಸ್ ಜಾರಿಬೆಟ್ಟಹಳ್ಳಿ ಗ್ರಾಮದಲ್ಲಿ ಕಂಡು ಬಂದ ವಾಂತಿಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ತಾಲೂಕು ಪಂಚಾಯಿತಿ ಇಓ, ಗ್ರಾಪಂ ಪಿಡಿಓ, ಗ್ರಾಮೀಣ ಕುಡಿಯುವ ನೀರು ಯೋಜನೆಯ ಇಇ, ಎಇಇ, ಎಇ ಅವರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.ತಹಸೀಲ್ದಾರ್ ಎಸ್.ಎನ್. ನರಗುಂದ, ಗ್ರೇಡ್- 2 ತಹಸೀಲ್ದಾರ್ ಸಣ್ಣರಾಮಪ್ಪ, ತಾಪಂ ಇಓ ಕುಲದೀಪ್, ತಾಲೂಕು ಆರೋಗ್ಯಾಧಿಕಾರಿ ಡಾ. ನಟರಾಜು, ಕುಡಿಯುವ ನೀರು ಯೋಜನೆಯ ಎಇಇ ಮೋಹನ್, ವೈದ್ಯರಾದ ಡಾ. ಮಧುಸೂದನ್, ಡಾ. ಸಚಿನ್, ಗ್ರಾಪಂ ಅಧ್ಯಕ್ಷೆ ಪವಿತ್ರ, ಪಿಡಿಓ ಶ್ರೀಧರ್ ಇದ್ದರು.