ಸಚಿವರು, ಶಾಸಕರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ: ವಿಜಯೇಂದ್ರ

| Published : Aug 05 2024, 01:38 AM IST / Updated: Aug 05 2024, 05:37 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಲು ಅವರ ಶಾಸಕರು, ಸಚಿವರುಗಳೇ ಕಾದು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

 ರಾಮನಗರ :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಲು ಅವರ ಶಾಸಕರು, ಸಚಿವರುಗಳೇ ಕಾದು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. 

ರಾಮನಗರದಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಪಶ್ಚಾತ್ತಾಪದ ಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಸದನದಲ್ಲಿ ಮೊದಲು ಮುಡಾ ಹಗರಣದ ಬಗ್ಗೆಯೇ ಮಾತನಾಡಬೇಕಿತ್ತು ಎಂದು ಕಾಂಗ್ರೆಸ್ ಶಾಸಕರೇ ನನಗೆ ಹೇಳಿದ್ದಾರೆ. ನಮ್ಮ ಪಾದಯಾತ್ರೆ ಯಾವಾಗ ಶುರುವಾಗಲಿದೆ ಎಂದು ಕಾಂಗ್ರೆಸ್‌ ಶಾಸಕರೇ ಕಾಯುತ್ತಿದ್ದರು. 

ನಮ್ಮ ಪಾದಯಾತ್ರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದಕ್ಕೆ ಅಲ್ಲ. ಅಹಿಂದಾ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದು ಹಗರಣಗಳಲ್ಲಿಯೇ ಮುಳುಗಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧವಾಗಿದೆ ಎಂದರು.ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದ ಕೋಟಿ, ಕೋಟಿ ಹಣ ವಾಪಸ್ಸು ಬರಬೇಕು. ಮುಡಾ ಹಗರಣದಲ್ಲಿ ನಿವೇಶನ ಕೈ ತಪ್ಪಿರುವ ಫಲಾನುಭವಿಗಳಿಗೆ ನಿವೇಶನ ಕೈ ಸೇರಬೇಕು. ಇಡೀ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು. 

ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವ ಕೀರ್ತಿ ಕಾಂಗ್ರೆಸ್ ಗೇ ಸಲ್ಲಬೇಕು. ಈ ಹಿಂದೆ ಇಂತಹ ಹಲವು ಘಟನೆಗಳು ನಡೆದಿವೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಬಂಡತನಕ್ಕೆ ಮತ್ತೊಂದು ಹೆಸರೇ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದರು.