ಹಿಂದುಳಿದ ವರ್ಗದವರು ಈಶ್ವರಪ್ಪರನ್ನು ಬೆಂಬಲಿಸಿ: ರಾಮಕೃಷ್ಣ ಮೂಡಲಿ

| Published : Mar 23 2024, 01:02 AM IST

ಸಾರಾಂಶ

ಪಕ್ಷದ ವರಿಷ್ಠರು ಸೂಚನೆ ಕೊಟ್ಟ ಸಂದರ್ಭದಲ್ಲಿ ಚುನಾವಣಾ ರಾಜಕೀಯ ಬಿಟ್ಟು ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡವರು. 2001ರಲ್ಲಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಕನಕಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಅಭ್ಯರ್ಥಿಗಳೇ ಇರಲಿಲ್ಲ. ಆ ಸಮಯದಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಎಲ್ಲಾ ಹಿಂದುಳಿದ ವರ್ಗದವರು ಬೆಂಬಲಿಸುವಂತೆ ಸಂಗೊಳ್ಳಿ ರಾಯಣ್ಣ, ಕುರುಬರ ವೇದಿಕೆ ಜಿಲ್ಲಾಧ್ಯಕ್ಷ ರಾಮಕೃಷ್ಣ ಮೂಡಲಿ ಮನವಿ ಮಾಡಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಕುಟುಂಬ ರಾಜಕಾರಣ ವಿರೋಧಿಸುತ್ತಲೇ ಅಧಿಕಾರಕ್ಕೆ ಬಂದಿದೆ. ಆದರೆ, ರಾಜ್ಯದಲ್ಲಿ ಮಾತ್ರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಲೇ ರಾಜ್ಯ ಬಿಜೆಪಿಯ ತಮ್ಮ ಇಚ್ಛೆಗೆ ತಕ್ಕಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕೆ.ಎಸ್.ಈಶ್ವರಪ್ಪ ಬಿಜೆಪಿಯ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷದ ವರಿಷ್ಠರು ಸೂಚನೆ ಕೊಟ್ಟ ಸಂದರ್ಭದಲ್ಲಿ ಚುನಾವಣಾ ರಾಜಕೀಯ ಬಿಟ್ಟು ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡವರು. 2001ರಲ್ಲಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಕನಕಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಅಭ್ಯರ್ಥಿಗಳೇ ಇರಲಿಲ್ಲ. ಆ ಸಮಯದಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿದ್ದರು. ಸ್ಪರ್ಧಿಸಿ 2 ಲಕ್ಷಕ್ಕೂ ಅಧಿಕ ಮತಗಳ ಪಡೆದು ಪಕ್ಷದ ಮರ್ಯಾದೆ ಉಳಿಸಿದ್ದರು ಎಂದು ತಿಳಿಸಿದರು.

2010ರಲ್ಲಿ ಸಚಿವರಾಗಿದ್ದ ಅವರು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡರು. ಬಿ.ಎಸ್.ಯಡಿಯೂರಪ್ಪ ಕೇಂದ್ರದ ನಾಯಕರೊಂದಿಗೆ ಮುನಿಸಿಕೊಂಡು ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಸಂದರ್ಭದಲ್ಲಿಯೂ ಪಕ್ಷ ತೊರೆಯದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರು ಎಂದರು.

ಒಂದು ಕುಟುಂಬಕ್ಕೆ ಒಂದು ಸ್ಥಾನ ಎಂಬ ನಿಯಮಕ್ಕೆ ಬದ್ಧರಾಗಿ ಅವರು ರಾಜಕೀಯ ನಿವೃತ್ತಿ ಘೋಷಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರಿಷ್ಠರು ಸ್ಪರ್ಧೆಯಿಂದ ಹಿಂದೆ ಸರಿಯಲು ಸೂಚಿಸಿದ್ದರಿಂದ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಎಸ್.ಎನ್. ಚನ್ನಬಸಪ್ಪನವರನ್ನು ಕಣಕ್ಕಿಳಿಸಿದಾಗಲು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಚನ್ನಬಸಪ್ಪರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ. ಅವರ ಮಗ ಕೆ.ಇ.ಕಾಂತೇಶ್ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ಒಂದು ವರ್ಷದ ಹಿಂದೆಯೇ ನಿಗದಿಯಾಗಿತ್ತು ಎಂದರು.

ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಕ್ಕಿ ನರಳುತ್ತಿದೆ. ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಒಬ್ಬ ಕುರುಬ ಅಭ್ಯರ್ಥಿಯನ್ನೂ ಬಿಜೆಪಿ ಕಣಕ್ಕಿಳಿಸಿದಿರುವುದನ್ನು ವೇದಿಕೆ ಖಂಡಿಸುತ್ತದೆ. ಈಶ್ವರಪ್ಪನವರು ಹಿಂದುತ್ವದ ಪರ ಗಟ್ಟಿಯಾಗಿ ಮಾತನಾಡುವ ಏಕೈಕ ನಾಯಕರಾಗಿದ್ದಾರೆ. ಈಶ್ವರಪ್ಪನವರು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದು ಅವರಿಗೆ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ. ಕ್ಷೇತ್ರದ ಎಲ್ಲಾ ಹಿಂದುಳಿದ ವರ್ಗದವರು ಅವರನ್ನು ಬೆಂಬಲಿಸಿ ಯಡಿಯೂರಪ್ಪ ಕುಟುಂಬದ ಸರ್ವಾಧಿಕಾರಿ ರಾಜಕಾರಣಕ್ಕೆ ತಿಲಾಂಜಲಿ ಇಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಸೀತಾರಾಮ್, ಚಂದ್ರಶೇಖರ್, ಕುಮಾರ್, ವಿಜಯ್, ರಾಜು, ಅಣಪ್ಪ್ಪಇದ್ದರು.