ಸಾರಾಂಶ
ತುಮಕೂರು: ಬದಲಾದ ಕಾಲಘಟ್ಟದಲ್ಲಿ ವಾತಾವರಣದಲ್ಲಿ ದಿನೇ ದಿನೇ ಹೊಸ ಕಾಯಿಲೆಗಳು ಹೆಚ್ಚುತ್ತಿದ್ದು, ಮನುಷ್ಯನ ಬಹು ಮುಖ್ಯ ಅಂಗಗಳಾದ ಕಿವಿ, ಮೂಗು, ಗಂಟಲಿನ ಅನೇಕ ಕಾಯಿಲೆಗಳು ಸೃಷ್ಟಿಯಾಗುತ್ತಿವೆ. ಇವುಗಳಲ್ಲಿ ಬ್ಯಾಕ್ಟೀರಿಯಲ್ -ವೈರಲ್ ರೋಗಲಕ್ಷಣಗಳು ಹೆಚ್ಚಾಗಿದ್ದು, ಇವುಗಳಿಗೆ ಸಮರ್ಪಕವಾದ ಆಧುನಿಕ ಚಿಕಿತ್ಸಾ ವಿಧಾನಗಳ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಗೃಹ ಸಚಿವ ಹಾಗೂ ಸಾಹೇ ವಿವಿಯ ಕುಲಾಧಿಪತಿ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು.ನಗರ ಹೊರ ವಲಯದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಆವರಣದಲ್ಲಿರುವ ಶಿಕ್ಷಣ ಭೀಷ್ಮ ಡಾ ಎಂ.ಗಂಗಾಧರಯ್ಯನವರ ಸ್ಮಾರಕ ಭವನದಲ್ಲಿ ಶುಕ್ರವಾರದಂದು ಏರ್ಪಟ್ಟ 41 ನೇ ರಾಜ್ಯ ಮಟ್ಟದ ಇಎನ್‌ಟಿ ಸಮ್ಮೇಳನ ಅಯೋಕ್ಕಾನ್-24 ನ್ನು ಉದ್ಘಾಟಿಸಿ ಮಾತನಾಡಿದರು. ಅವರು, ವಿವಿಧ ರೀತಿಯಲ್ಲಿ ಕಂಡುಬರುವ ಕಿವಿ ಮೂಗು ಗಂಟಲುಗಳಿಗೆ ಸಂಬಂಧಿತ ಕಾಯಿಲೆಗಳಿಗೆ ಹೊಸ ವಿಧಾನಗಳ ಮೂಲಕ ಆವಿಷ್ಕಾರ ತಾಂತ್ರಿಕ ವ್ಯವಸ್ಥೆಗಳನ್ನು ವೈದ್ಯರುಗಳು ಅಳವಡಿಸಿಕೊಂಡು ಚಿಕಿತ್ಸೆಗಳನ್ನು ನೀಡಬೇಕಾಗಿದೆ ಎಂದರು.ಪ್ರತಿನಿತ್ಯ ಕಂಡು ಬರುವ ಕಿವಿ ಮೂಗು ಗಂಟಲಿನ ಸೂಕ್ಷ್ಮ ರೀತಿಯ ಕಾಯಿಲೆಗಳಿಗೆ ಶೇಕಡ 75 ರಷ್ಟು ಜನರು ತುತ್ತಾಗುತ್ತಿದ್ದು ಇವುಗಳಿಗೆ ಅನುಗುಣವಾಗಿ ಗುಣಾತ್ಮಕ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಿದ್ದಾರ್ಥ ಹೈಯರ್ ಆಫ್ ಎಜುಕೇಶನ್ ಸಹಯೋಗದೊಂದಿಗೆ ನಡೆಯುತ್ತಿರುವ ರಾಜ್ಯಮಟ್ಟದ ಇಎನ್‌ಟಿ ಸಮ್ಮೇಳನ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಕಿವಿ ಮೂಗು ಗಂಟಲು ಸಂಬಂಧಿತ ಕಾಯಿಲೆಗಳಿಗೆ ಆವಿಷ್ಕಾರಕವಾದ ಔಷಧಿಗಳು ಚಿಕಿತ್ಸಾ ವಿಧಾನಗಳು ಉತ್ತಮ ರೀತಿಯಲ್ಲಿ ಸುಧಾರಿಸಬೇಖಾಗಿದೆ. ಸಮ್ಮೇಳನ ವಿಚಾರ ಸಂಕಿರಣ, ಚರ್ಚೆಗಳು ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳ ಇಎನ್‌ಟಿ ನುರಿತ ವೈದ್ಯರುಗಳಿಂದ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಇಂದಿನ ಯುವ ವೈದ್ಯರುಗಳಿಗೆ ಅರಿವು ಮೂಡಿಸಬೇಕಾಗಿದೆ. ಈಗಾಗಲೇ ಅನೇಕ ಯುವ ವೈದ್ಯರು ಅನೇಕ ಆವಿಷ್ಕಾರಗಳನ್ನ ನಡೆಸಿ ಹೊಸ ತಾಂತ್ರಿಕ ಚಿಕಿತ್ಸಾ ವಿಧಾನಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈ ಪ್ರಯತ್ನಗಳು ಮುಂದುವರಿಯಬೇಕು ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.
ಅಯೋಕ್ಕಾನ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ ಶಂಕರ್ ಮೇದಿಕೇರಿ ಮಾತನಾಡಿ, ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ ಇಎನ್‌ಟಿ ನುರಿತ ವೈದ್ಯರುಗಳು ಆಗಮಿಸಿದ್ದು, ತುಮಕೂರಿನಲ್ಲಿಯೇ ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತಿರುವುದು ಪ್ರಶಂಸನೀಯವಾಗಿದೆ. ಸಮ್ಮೇಳನದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ವೈದ್ಯರಲ್ಲಿ ವಿನಂತಿಸಿದರು.ಸಮಾರಂಭದಲ್ಲಿ ಸಾಹೇ ವಿವಿಯ ಉಪಕುಲಪತಿ ಡಾ.ಬಿ.ಕೆ.ಲಿಂಗೇಗೌಡ, ಸಿದ್ದಾರ್ಥ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಸಾಣ ಕೊಪ್ಪ, ಉಪಪ್ರಾಂಶುಪಾಲ ಡಾ. ಪ್ರಭಾಕರ್, ಸಮ್ಮೇಳನ ಸಮಿತಿ ಸಂಚಾಲಕರಾದ ಡಾ.ಜ್ಯೋತಿ ಸ್ವರೂಪ್, ಡಾ.ರಾಘವೇಂದ್ರ ಕೆ.ಜಿ., ಡಾ.ಇಂದುಶೇಖರ್ ಸಿಂಗ್ ಬಿ.ಎಸ್.,ಡಾ.ರವಿಕುಮಾರ್ ಸಿ.ಜಿ, ಡಾ.ಮುನೀಶ್ವರ ಜಿ.ಬಿ. ಸೇರಿದಂತೆ ರಾಜ್ಯದ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ತಂಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಮ್ಮೇಳನದ ವೇಳೆ ಗಂಗಾಧರಯ್ಯ ಸ್ಮಾರಕ ಭವನದ ಆವರಣದಲ್ಲಿ ಇಎನ್‌ಟಿ ಸಂಬಂಧಿತ ಕಾಯಿಲೆಗಳ ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗುವ ವೈದ್ಯಕೀಯ ಉಪಕರಣಗಳ ಮಳಿಗೆಗಳನ್ನು ತೆರಯಲಾಗಿತ್ತು. ವಿವಿಧ ಆಸ್ಪತ್ರೆಗಳ ವೈದ್ಯರುಗಳು ಮಳಿಗೆಗೆ ಭೇಟಿ, ಉಪಕರಣಗಳನ್ನು ಖರೀದಿಸಲು ಮುಂದಾಗಿದ್ದರು. ಅಯೋಕ್ಕಾನ್-೨೪ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಭಾಷಣಗಳು, ಆಹ್ವಾನಿತ ಮಾತುಕತೆಗಳು, ಚರ್ಚೆಗಳು, ವೈಜ್ಞಾನಿಕ ವಿಷಯ ಮಂಡನೆಗಳು, ವೈಜ್ಞಾನಿಕ ವೀಡಿಯೋ ಪ್ರಸ್ತುತಿ, ಇ-ಪೋಸ್ಟರ್ ಪ್ರಸ್ತುತಿ, ಏಕಲವ್ಯ ರಸಪ್ರಶ್ನೆ ,ಭಾಷಣಗಳು, ಆಹ್ವಾನಿತ ಮಾತುಕತೆಗಳು, ಪ್ಯಾನಲ್ ಚರ್ಚೆಗಳು, ಮುಕ್ತ ಸಭೆಗಳು ನಾಲ್ಕು ದಿನಗಳ ವೈದ್ಯಕೀಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ.ಇತ್ತೀಚೆಗೆ ಹೆಚ್ಚಾಗುತ್ತಿರುವ ಬ್ಯಾಕ್ಟೀರಿಯಲ್ ಮತ್ತು ವೈರಲ್ ಡಿಸೀಸಸ್ ಗಳು ವೈದ್ಯರಿಗೂ ಸ್ಪರ್ಧಾತ್ಮಕವಾಗಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೋಗಗಳ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ನಡೆಯುತ್ತಿವೆ. ಮರಣಾಂತಿಕವಾಗಿ ಪರಿಣಮಿಸುವ ಈ ಕಾಯಿಲೆಗಳಿಗೆ ತಾಂತ್ರಿಕವಾಗಿ ಗುಣಪಡಿಸುವ ಚಿಕಿತ್ಸಾ ವಿಧಾನಗಳ ಅಳವಡಿಕೆ ಹೆಚ್ಚಾಗಬೇಕಾಗಿದೆ. -ಡಾ. ಜಿ.ಪರಮೇಶ್ವರ್, ಗೃಹ ಸಚಿವ.