ನಾಯಿ ಬಿಸ್ಕೆಟ್ ತಯಾರಿಕಾ ಘಟಕದಿಂದ ದುರ್ವಾಸನೆ: ಅಧಿಕಾರಿಗಳ ದಾಳಿ

| Published : May 02 2024, 12:15 AM IST

ನಾಯಿ ಬಿಸ್ಕೆಟ್ ತಯಾರಿಕಾ ಘಟಕದಿಂದ ದುರ್ವಾಸನೆ: ಅಧಿಕಾರಿಗಳ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪರವಾನಗಿ ಅವಧಿ ಮುಗಿದ ಬಳಿಕ ಅನಧಿಕೃತವಾಗಿ ಘಟಕವನ್ನು ಮುಂದುವರಿಸಿದ ಸಂಸ್ಥೆಯ ಮಾಲಕರನ್ನು ಹಾಗೂ ಕ್ರಮಕೈಗೊಳ್ಳದ ಗ್ರಾ.ಪಂ. ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ತಕ್ಷಣ ಘಟಕವನ್ನು ಮುಚ್ಚುವಂತೆ ಗ್ರಾ.ಪಂ.ಗೆ ಆದೇಶಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ಮೇರಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ಮಣ್ಣ್ ಪೈಕ ಎಂಬಲ್ಲಿ ಅನಧಿಕೃತ ಶೆಡ್‌ವೊಂದರಲ್ಲಿ ನಡೆಯುತ್ತಿದ್ದ ನಾಯಿ ಬಿಸ್ಕೆಟ್‌ ತಯಾರಿ ಘಟಕದಿಂದ ವಿಪರೀತ ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರ ಪ್ರತಿಭಟನೆಗೆ ಮಣಿದ ಬಂಟ್ವಾಳ ತಾ.ಪಂ. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿ ಮಂಗಳವಾರ ಬೀಗ ಜಡಿದಿದ್ದಾರೆ.

ಕೊಡ್ಮಣ್ಣು ಪೈಕ ಎಂಬಲ್ಲಿರುವ ಶಾಲೆ ಮತ್ತು ವಸತಿ ಪರಿಸರದಲ್ಲಿ ಸಂಸ್ಥೆಯೊಂದು ನಾಯಿಗಳ ಆಹಾರವಾದ ಬಿಸ್ಕೆಟ್‌ ತಯಾರಿಸುವ ಘಟಕವೊಂದು ಹಲವು ಸಮಯದಿಂದ ಕಾರ್ಯಾಚರಿಸುತ್ತಿತ್ತು. ಶೆಡ್‌ನಂತಿರುವ ಈ ಘಟಕಕ್ಕೆ ಪುದು ಗ್ರಾಮ ಪಂಚಾಯಿತಿ ಈ ಹಿಂದೆ ಪರವಾನಗಿ ನೀಡಿತ್ತು ಎನ್ನಲಾಗಿದೆ.

ಘಟಕದ ಪರವಾನಗಿ ಅವಧಿ ಪೂರ್ಣಗೊಂಡು ವರ್ಷವೇ ಕಳೆದಿದ್ದು, ಇದೀಗ ಅನಧಿಕೃತವಾಗಿ ನಾಯಿ ಬಿಸ್ಕೆಟ್‌ ತಯಾರಿ ಮಾಡಲಾಗುತ್ತಿತ್ತು. ಇಲ್ಲಿ ಬಿಸ್ಕೆಟ್‌ ತಯಾರಿಗೆ ಕೋಳಿ, ಗೋವಿನ ಸಹಿತ ವಿವಿಧ ಪ್ರಾಣಿಗಳ ತ್ಯಾಜ್ಯಗಳನ್ನು ಮಿಶ್ರಣಗೊಳಿಸಲಾಗುತ್ತಿದ್ದು, ರಾತೋರಾತ್ರಿ ಈ ತ್ಯಾಜ್ಯಗಳನ್ನು ಘಟಕದಲ್ಲಿ ತಂದು ಶೇಖರಿಸಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ರೀತಿ ತಂದು ಶೇಖರಿಸಲಾಗುತ್ತಿರುವ ತ್ಯಾಜ್ಯದ ರ್ದುವಾಸನೆ ಇಡೀ ಪರಿಸರವನ್ನು ಆವರಿಸುವುದರಿಂದ ಸ್ಥಳೀಯರಿಗೆ ವಾಸಿಸಲು ಅಸಹನೀಯ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೆ ಜನರ ಆರೋಗ್ಯದ ಮೇಲೂ ದುಪ್ಪರಿಣಾಮ ಬೀರುತ್ತಿತ್ತು ಎಂದು ದೂರಲಾಗಿದೆ.

ಪರವಾನಗಿಯ ಅವಧಿ ಕಳೆದರೂ ಕಳೆದೊಂದು ವರ್ಷದಿಂದ ಅನಧಿಕೃತವಾಗಿ ಈ ಘಟಕ ಮುಂದುವರಿದಿರುವುದು ಹಾಗೂ ಮಾಂಸದ ತ್ಯಾಜ್ಯಗಳನ್ನು ತಂದು ಶೇಖರಿಸುವ ಪರಿಸರ ದುರ್ವಾಸನೆ ಬೀರುತ್ತಿರುದ್ದರೂ ಕ್ರಮ ಕೈಗೊಳ್ಳದ ಗ್ರಾ.ಪಂ.ನ ಧೋರಣೆಯ ಬಗ್ಗೆ ಆಕ್ರೋಶಿತರಾದ ಸ್ಥಳೀಯರು ಸೋಮವಾರ ರಾತ್ರಿ ಘಟಕದ ಮುಂದೆ ಹಠಾತ್ ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿ ತ್ಯಾಜ್ಯದಿಂದ ಬೀರುವ ದುರ್ವಾಸನೆಯ ಬಗ್ಗೆ ತಾ.ಪಂ.ಇಒ ಹಾಗೂ ಗ್ರಾ.ಪಂ.ಗೆ ವಿವರಿಸಿದರಲ್ಲದೆ ಘಟಕವನ್ನು ಮುಚ್ಚುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಂಡರು.

ಅಧಿಕಾರಿಗಳ ದಂಡು ಸ್ಥಳಕ್ಕೆ ದೌಡು: ಮಂಗಳವಾರ ಬೆಳಗ್ಗೆ ಬಂಟ್ವಾಳ ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ, ಆರೋಗ್ಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿ.ಡಿ.ಒ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಸ್ಥಳದಲ್ಲಿ ಅಸಹ್ಯಕರವಾದ ರ್ದುವಾಸನೆ ಬರುತ್ತಿರುವುದು ದೃಢಪಟ್ಟು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪರವಾನಗಿ ಅವಧಿ ಮುಗಿದ ಬಳಿಕ ಅನಧಿಕೃತವಾಗಿ ಘಟಕವನ್ನು ಮುಂದುವರಿಸಿದ ಸಂಸ್ಥೆಯ ಮಾಲಕರನ್ನು ಹಾಗೂ ಕ್ರಮಕೈಗೊಳ್ಳದ ಗ್ರಾ.ಪಂ. ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ತಕ್ಷಣ ಘಟಕವನ್ನು ಮುಚ್ಚುವಂತೆ ಗ್ರಾ.ಪಂ.ಗೆ ಆದೇಶಿಸಿದರು. ಅದರಂತೆ ಅನಧಿಕೃತ ಘಟಕಕ್ಕೆ ಬೀಗ ಜಡಿಯಲಾಗಿದೆ.