ಬಾಡ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ಥಳಾಂತರಕ್ಕೆ ಆದೇಶ

| Published : Jun 24 2024, 01:30 AM IST

ಬಾಡ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ಥಳಾಂತರಕ್ಕೆ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಬಾಡ ಕಾಲೇಜನ್ನು ಕನಿಷ್ಠ ತಾಲೂಕಿನಲ್ಲೇ ಉಳಿಸಿಕೊಳ್ಳುವ ಬಗ್ಗೆ ಗಟ್ಟಿ ಹೋರಾಟ ನಡೆಯಲೇ ಇಲ್ಲ.

ಕುಮಟಾ: ತಾಲೂಕಿನ ಬಾಡದ ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಬೆಂಗಳೂರಿನ ಬ್ಯಾಟರಾಯನಪುರಕ್ಕೆ ಸ್ಥಳಾಂತರಿಸಿ ಕಾಲೇಜು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಹಿಂದೆ ೨೦೦೦ನೇ ಇಸವಿಯಲ್ಲಿ ಬಾಡಕ್ಕೆ ಸರ್ಕಾರಿ ಕಾಲೇಜು ಮಂಜೂರಿಯಾಗಿತ್ತು. ಅಂದು ಉದ್ಘಾಟನೆಗಾಗಿ ಆಡಳಿತ ಪಕ್ಷದ ಎದುರು ತೊಡೆತಟ್ಟಿದ ಅಂದಿನ ಶಾಸಕ ಮೋಹನ ಶೆಟ್ಟಿ ಪೊಲೀಸ್ ಬಂದೋಬಸ್ ನಡುವೆಯೇ ಕಾಲೇಜು ಗೇಟಿನಲ್ಲೇ ದೀಪಬೆಳಗಿ ಕಾಲೇಜು ಉದ್ಘಾಟನೆಯಾಯಿತೆಂದು ಘೋಷಿಸಿದ್ದರು. ಅಂದಿನಿಂದ ಸಾಕಷ್ಟು ಎಡವುತ್ತಲೇ ಸಾಗಿದ ಕಾಲೇಜು ಅಂತೂ ಸಂಪೂರ್ಣ ಬಾಗಿಲು ಎಳೆದುಕೊಂಡಂತಾಗಿದೆ.

ಆರಂಭದಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಸಂಖ್ಯಾಬಲ ಗಳಿಸಿದ್ದ ಬಾಡ ಪ್ರಥಮದರ್ಜೆ ಕಾಲೇಜು ಉತ್ತಮವಾಗಿ ನಡೆದಿತ್ತು. ಸರಿಯಾದ ಕೊಠಡಿ, ಜಾಗದ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿತ್ತು. ಪಿಎಂ ಉಷಾ ಯೋಜನೆಯಡಿ ಬಾಡ ಕಾಲೇಜಿಗೆ ₹೫ ಕೋಟಿ ಮಂಜೂರಾಗಿತ್ತು. ಜಾಗದ ಅಲಭ್ಯತೆಯಿಂದ ಅನುದಾನವಿದ್ದರೂ ಕಾಲೇಜಿಗೆ ಕಟ್ಟಡ ನಿರ್ಮಿಸಲಾಗಲೇ ಇಲ್ಲ. ಕಾಲೇಜಿನ ಸ್ಥಿತಿಯಿಂದಾಗಿ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಕುಮಟಾ ಪಟ್ಟಣದಲ್ಲಿರುವ ಸರ್ಕಾರಿ ಹಾಗೂ ಇತರ ಕಾಲೇಜುಗಳಿಗೆ ಕಳಿಸತೊಡಗಿದರು.

ಹೀಗಾಗಿ ಇತ್ತೀಚಿನ ೫- ೬ ವರ್ಷಗಳಿಂದ ಬಾಡ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕ್ಷೀಣಿಸಿದೆ. ಈ ವರ್ಷ ಕಾಲೇಜಿಗೆ ಕೇವಲ ೩ ವಿದ್ಯಾರ್ಥಿಗಳು ದಾಖಲಾತಿ ಬಯಸಿ ಬಂದಿದ್ದರು. ಆದರೆ ಕೆಲ ದಿನಗಳ ಹಿಂದೆಯೇ ಯಾವುದೇ ಹೊಸ ದಾಖಲಾತಿ ಮಾಡದಂತೆ ಪ್ರಾಚಾರ್ಯರಿಗೆ ಸೂಚನೆ ಬಂದಿದೆ. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ೨೨ ವಿದ್ಯಾರ್ಥಿಗಳಿಗೆ ಸನಿಹದ ಪ್ರಥಮದರ್ಜೆ ಕಾಲೇಜಿನಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.

ಏಕೆಂದರೆ ಉನ್ನತ ಶಿಕ್ಷಣ ಇಲಾಖೆ(ಕಾಲೇಜು ಶಿಕ್ಷಣ) ಸರ್ಕಾರದ ಆಧೀನ ಕಾರ್ಯದರ್ಶಿ ಎಂ. ಧನಂಜಯ ಆದೇಶ ನೀಡಿದ್ದು, ಕಾಲೇಜಿನ ಎಲ್ಲ ಕೋರ್ಸ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹುದ್ದೆ ಸಮೇತ ೨೦೨೪- ೨೫ ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಬೆಂಗಳೂರು ನಗರದ ಬ್ಯಾಟರಾಯನಪುರಕ್ಕೆ ಸ್ಥಳಾಂತರಿಸಿ ಆದೇಶ ಮಾಡಿದ್ದಾರೆ. ಬಾಡ ಕಾಲೇಜನ್ನು ಕನಿಷ್ಠ ತಾಲೂಕಿನಲ್ಲೇ ಉಳಿಸಿಕೊಳ್ಳುವ ಬಗ್ಗೆ ಗಟ್ಟಿ ಹೋರಾಟ ನಡೆಯಲೇ ಇಲ್ಲ. ಏಕೆಂದರೆ ಹಿರೇಗುತ್ತಿಯಲ್ಲಿ ಈಗಾಗಲೇ ಸರ್ಕಾರಿ ಪಿಯು ಕಾಲೇಜು ಇದೆ. ಸಾಕಷ್ಟು ಸರ್ಕಾರಿ ಭೂಮಿಯೂ ಇದೆ. ಸುತ್ತಮುತ್ತಲೂ ಇರುವ ೩೦ ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಒಂದು ಪ್ರಥಮದರ್ಜೆ ಕಾಲೇಜು ಅತ್ಯಗತ್ಯವಿತ್ತು. ಈಗ ಇಡೀ ತಾಲೂಕಿಗೆ ಒಂದೇ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇದ್ದಂತಾಗಿದೆ.