ಸಾರಾಂಶ
ಬ್ಯಾಡಗಿ: ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ವ್ಯಾಪಾರಿ ಕೇಂದ್ರ ಬ್ಯಾಡಗಿ ಪಟ್ಟಣಕ್ಕೆ ಮೇಘಾಲಯ ನೂತನ ರಾಜ್ಯಪಾಲರಾಗಿ, ಪಟ್ಟಣದ ಬಿನ್ನಾಳ ಮಾಸ್ತರ ಪುತ್ರ, ಸಿ.ಎಚ್. ವಿಜಯಶಂಕರ ಬಿನ್ನಾಳ (ಹಂಡಬಂಢರ) ನಿಯೋಜನೆಗೊಳ್ಳುವ ಮೂಲಕ ಪಟ್ಟಣದ ಖ್ಯಾತಿಗೆ ಮತ್ತೊಂದು ಗರಿಯನ್ನು ಮೂಡಿಸಿದ್ದಾರೆ.
ಪಟ್ಟಣದ ಬಿನ್ನಾಳ ಮಾಸ್ತರ ಮಗನೊಬ್ಬ ಇಂತಹದ್ದೊಂದು ಸಾಧನೆ ತಲುಪಿದ್ದು ಪಟ್ಟಣದ ಖ್ಯಾತಿ ಹೆಚ್ಚಿಸಿದೆ. ಹುಣಸೂರು ಕ್ಷೇತ್ರದ ಶಾಸಕರಾಗಿ, ಮೈಸೂರು-ಕೊಡಗು 2 ಬಾರಿ ಲೋಕಸಭೆ ಸದಸ್ಯರಾಗಿ, ರಾಜ್ಯದ ಅರಣ್ಯ ಇಲಾಖೆ ಕ್ಯಾಬಿನೆಟ್ ಸಚಿವರಾಗಿ ವಿಜಯಶಂಕರ್ ಕೆಲಸ ನಿರ್ವಹಿಸಿರುವ ಅನುಭವ ಹೊಂದಿದ್ದು, ಮೇಘಾಲಯದ ನೂತನ ರಾಜ್ಯಪಾಲರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಒಡೆಯರನ್ನೇ ಸೋಲಿಸಿದ್ದ ವಿಜಯಶಂಕರ: ಬ್ಯಾಡಗಿಯಲ್ಲಿ ಶಿಕ್ಷಣ ಪಡೆದಿದ್ದರೂ ಸಹ ರಾಜಕೀಯ ನೆಲೆಯನ್ನು ಕಂಡುಕೊಂಡಿದ್ದು ಮೈಸೂರು ಜಿಲ್ಲೆಯಿಂದ ಅದರಲ್ಲೂ ಮೈಸೂರು ಮತಕ್ಷೇತ್ರದಿಂದ 2004ರಲ್ಲಿ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ 2ನೇ ಬಾರಿ ಆಯೆಯಾಗಿದ್ದರು.
ಕಬಡ್ಡಿ ಆಟಗಾರನ ಸಾಧನೆ: ಉತ್ತಮ ಕಬಡ್ಡಿ ಆಟಗಾರರಾಗಿದ್ದ ಸಿ.ಎಚ್. ವಿಜಯಶಂಕರ ಬ್ಯಾಡಗಿಯ ನ್ಯಾಶನಲ್ ಯುಥ್ ಕ್ಲಬ್ ತಂಡದ ಸದಸ್ಯರಾಗಿ ಹಲವು ಕಬಡ್ಡಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಟ್ಟಣದಲ್ಲಿ ಬಹುದೊಡ್ಡ ಗೆಳೆಯರ ಪಡೆಯನ್ನು ಹೊಂದಿದ್ದಾರೆ.ಪಟ್ಟಣದ ಹೊರವಲಯದಲ್ಲಿ (ಗುಮ್ಮನಹಳ್ಳಿ ಬಳಿ) ಸ್ವಂತ ಜಮೀನು ಹೊಂದಿರುವ ವಿಜಯಶಂಕರ ಆಗಾಗ್ಗೆ ಇಲ್ಲಿಗೆ ಬರುವ ಮೂಲಕ ತಮ್ಮ ಜಮೀನಿನಲ್ಲಿರುವ ಆರಾಧ್ಯದೈವಕ್ಕೆ ಪೂಜೆಯನ್ನು ಸಲ್ಲಿಸಿ ತೆರಳುತ್ತಿದ್ದರು, ಅಂತೆಯೇ ಈಗಲೂ ಸಹ ಪೂಜೆ ಸಲ್ಲಿಸಲು ಬರುವ ನಿರೀಕ್ಷೆ ಇದೆ.
ಬ್ಯಾಡಗಿಯಲ್ಲಿ ಮೊದಲು:ಹಾವೇರಿ ಜಿಲ್ಲೆ ಸೇರಿದಂತೆ ಬ್ಯಾಡಗಿ ಪಟ್ಟಣದ ವಿಜಯಶಂಕರ ರಾಜ್ಯಪಾಲರಾಗಿ ಇಂತಹದ್ದೊಂದು ಸಾಧನೆ ಮಾಡಿದ್ದು ಇದೇ ಮೊದಲಾಗಿದ್ದು, ಅವರ ಸಾಧನೆಗೆ ಸಹೋದರ ಸಂಬಂಧಿ ಮೋಹನ ಬಿನ್ನಾಳ ಸೇರಿದಂತೆ ಬ್ಯಾಡಗಿ ಪಟ್ಟಣದ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.ಹಾಲುಮತ (ಕುರುಬ) ಸಮುದಾಯಕ್ಕೆ ಸೇರಿದ ಸರಳ ಸಜ್ಜನಿಕೆಯ ವಿಜಯಶಂಕರ ರಾಜ್ಯಪಾಲರಾಗಿ ಆಯ್ಕೆಯಾಗಿದ್ದು ಸಂತಸದ ಸಂಗತಿ, ಅದರಲ್ಲೂ ಕಾಗಿನೆಲೆ ಕನಕಗುರು ಪೀಠವಿರುವ ಬ್ಯಾಡಗಿ ತಾಲೂಕಿನವರು ಎಂಬುದು ಹೆಮ್ಮೆಯ ವಿಷಯ. ಅವರ ಸಾಧನೆಯ ದಾರಿಗೆ ಗುರು ರೇವಣಸಿದ್ದೇಶ್ವರ ಆಶೀರ್ವಾದ ಸದಾಕಾ ಲವಿರಲಿ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಸ್ವಾಮೀಜಿ ಹೇಳಿದರು.ಸರಳ ಸಜ್ಜನಿಕೆಯ ಹಿರಿಯ ಮುತ್ಸದ್ಧಿ ರಾಜಕಾರಣಿ ವಿಜಯಶಂಕರ ಅವರು ಮೇಘಾಲಯ ರಾಜ್ಯಪಾಲರಾಗಿ ಆಯ್ಕೆಯಾಗಿದ್ದು ಸಂತಸದ ವಿಷಯ, ನನಗೂ ಸಹ ಚಿರಪರಿಚಿತರಾಗಿದ್ದು ಬ್ಯಾಡಗಿ ಮತಕ್ಷೇತ್ರದವರು ಇಂತಹ ಸಾಧನೆ ಮಾಡುವ ಮೂಲಕ ಕ್ಷೇತ್ರದ ಗೌರವವನ್ನು ಹೆಚ್ಚಿಸಿದ್ದಾರೆ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.