ಸಾರಾಂಶ
ಪಟ್ಟಣದಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿ ‘ಬೆತ್ತಲೆ ಪ್ರತಿಭಟನೆ’ ಗೆ ಮುಂದಾಗಿದ್ದ ಅಗಲೀಕರಣ ಹೋರಾಟ ಸಮಿತಿಯ 8 ಜನ ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆಯಿತು.
ಬ್ಯಾಡಗಿ: ಪಟ್ಟಣದಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿ ‘ಬೆತ್ತಲೆ ಪ್ರತಿಭಟನೆ’ ಗೆ ಮುಂದಾಗಿದ್ದ ಅಗಲೀಕರಣ ಹೋರಾಟ ಸಮಿತಿಯ 8 ಜನ ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆಯಿತು.
ಕಳೆದ 15 ವರ್ಷಗಳಿಂದ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಹೋರಾಟ ನಡೆಯುತ್ತಾ ಬಂದಿದ್ದು ಅವರ ಬೇಡಿಕೆ ಈಡೇರದ ಕಾರಣ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವುದೂ ಸೇರಿದಂತೆ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದರು.ಸಂಧಾನ ವಿಫಲ: ಪ್ರತಿಭಟನೆ ಕುರಿತು ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆಗಳು ಹಲವು ದಿನದಿಂದ ಹೋರಾಟಗಾರರ ಮನವೊಲಿಕೆಗೆ ಮುಂದಾಗಿದ್ದಲ್ಲದೇ ಬೆತ್ತಲೆ ಮೆರವಣಿಗೆ ಮಾಡದಂತೆ ಮನವಿ ಮಾಡಿದ್ದವು, ರಕ್ಷಣಾ ಇಲಾಖೆ ನೇತೃತ್ವದಲ್ಲಿ ನಡೆದ ಮೂರ‍್ನಾಲ್ಕು ಸಂಧಾನ ಸಭೆಗಳು ವಿಫಲವಾಗಿದ್ದವು.
ಪೊಲೀಸರು ಮತ್ತು ತಹಸೀಲ್ದಾರ್ ಮನವೊಲಿಕೆಗೆ ಜಗ್ಗದ ಹೋರಾಟಗಾರರು ಸೋಮವಾರ ಪ್ರತಿಭಟನೆ ಮಾಡಿಯೇ ತಿರುತ್ತೇವೆ ಎಂದು ಬಿಗಿಪಟ್ಟು ಹಿಡಿದಿದ್ದರು. ಸುಮಾರು 50ಕ್ಕೂ ಪ್ರತಿಭಟ ನಾಕಾರರು ಪಟ್ಟಣದ ಹಳೇ ಪುರಸಭೆ ಎದುರು ಬೆತ್ತಲೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು.ಪೊಲೀಸ್ ಮನವಿಗೆ ಜಗ್ಗದೇ ಪ್ರತಿಭಟನೆ ಮಾಡಲು ಮುಂದಾಗಿದ್ದ 8 ಮುಖಂಡರನ್ನು ವಶಕ್ಕೆ ತೆಗೆದುಕೊಂಡರು. ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ವಿನಾಯಕ ಕಂಬಳಿ, ಮೋಹನ ಬಿನ್ನಾಳ, ಶಿವಕುಮಾರ ಕಲ್ಲಾಪೂರ, ಈಶ್ವರ ಮಠದ, ಹರೀಶ ರಿತ್ತಿ, ಪ್ರದೀಪ್ ಜಾಧವ, ಮಂಜುನಾಥ ಜಾಧವ ಅವರನ್ನು ಪೊಲೀಸರು ಬಂಧಿಸಿದ್ದಾರೆ
ಧ್ವನಿ ಅಡಗಿಸುವ ಹುನ್ನಾರ:ಅಗಲೀಕರಣಕ್ಕಾಗಿ ಕಳೆದ 15 ವರ್ಷದಿಂದ ನಿರಂತರವಾಗಿ ವಿಷಯಾಧಾರಿತ ಹೋರಾಟ ನಡೆಸುತ್ತಿದ್ದೇವೆ. ಕತ್ತೆ ಮೆರವಣಿಗೆ, ಸಗಣಿ ಎರಚಿಕೊಂಡು ಪ್ರತಿಭಟನೆ, ಆಮರಣಾಂತ ಉಪವಾಸ ಸತ್ಯಾಗ್ರಹ, ಅಹೋರಾತ್ರಿ ಧರಣಿ, ಕತ್ತೆ ಮೆರವಣಿಗೆ, ಬ್ಯಾಡಗಿ ಬಂದ್, ಎಮ್ಮೆಗಳ ಮೈತೊಳೆದು ಪ್ರತಿಭಟನೆ, ಕೆಸರಲ್ಲಿ ಹೊರಳಾಡಿ, ಮುಖ್ಯರಸ್ತೆಯಲ್ಲಿ ನಿಂತ ನೀರಲ್ಲಿ ದೋಣಿ ಬಿಡುವುದು ಸೇರಿದಂತೆ ಹತ್ತಾರು ಹೋರಾಟ ಮಾಡಿದ್ದೇವೆ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಹಿಂಜರಿದಿರಲಿಲ್ಲ, ಇದೀಗ ನಮ್ಮನ್ನು ಬಂಧಿಸುವ ಮೂಲಕ ಇಂತಹ ಅಸಂವಿಧಾನಿಕ ನಿರ್ಣಯಗಳಿಂದ ಅಗಲೀಕರಣ ವಿರೋಧಿಗಳ ಜೊತೆ ಕೈಜೋಡಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.ವಿಶ್ವವಿಖ್ಯಾತ ಮಾರುಕಟ್ಟೆಗೆ ಅವಶ್ಯವಿರುವ ಮುಖ್ಯರಸ್ತೆ ಅಗಲೀಕರಣ ಮಾಡಿ ಎಂದರೆ ನಮ್ಮನ್ನು ಬಂಧಿಸುತ್ತೀರಾ? ಸಾರ್ವ ಜನಿಕ ಸಮಸ್ಯೆ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಹೊರಗೆ ಬಂದ ಮೇಲೆ ಹೋರಾಟ ಮತ್ತೆ ಆರಂಭಿಸುತ್ತೇವೆ ಎಂದು ಹೋರಾಟಗಾರ ವಿನಾಯಕ ಕಂಬಳಿ ಹೇಳಿದರು.