ಸಾರಾಂಶ
ಹೊಸ ದಾಖಲೆ ಸೃಷ್ಟಿ । ದರದಲ್ಲಿ ಸ್ಥಿರತೆ । ಟೆಂಡರ್‌ಗಿಡಲು ಸ್ಥಳಾವಕಾಶದ ಕೊರತೆಕನ್ನಡಪ್ರಭ ವಾರ್ತೆ ಬ್ಯಾಡಗಿ
ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 3.34 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ.ಮಾರುಕಟ್ಟೆ ಇತಿಹಾಸದಲ್ಲಿ ಇಲ್ಲಿಯವರೆಗೂ 2.94 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದ್ದೇ ಅತೀ ಹೆಚ್ಚು. ಆದರೆ ಆ ದಾಖಲೆ ಈಗ ಧೂಳಿಪಟವಾಗಿದೆ. ವಾಸ್ತವದಲ್ಲಿ ಬ್ಯಾಡಗಿ ಮಾರುಕಟ್ಟೆಗೆ ಸುಮಾರು 4 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಆಗಮಿಸಿದೆ ಎಂದು ಅಂದಾಜಿಸಲಾಗಿದೆ.
ತಡವಾಗಿ ಬಂದಿದ್ದು ಸೇರಿದಂತೆ ಟೆಂಡರ್‌ಗಿಡಲು ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಸಾವಿರಾರು ಚೀಲ ಮೆಣಸಿನಕಾಯಿಗಳು ನೂರಾರು ವಾಹನಗಳಲ್ಲಿಯೇ ಉಳಿದವು. ಅವನ್ನು ವಾಹನದಿಂದ ಕೆಳಕ್ಕಿಳಿಸಲು, ಟೆಂಡರ್‌ಗೆ ಇಡಲು ಸಾಧ್ಯವಾಗಲೇ ಇಲ್ಲ.ಫೆ.19ರಂದು ಪಟ್ಟಣದ ವೀರಭದ್ರೇಶ್ವರ ಜಾತ್ರೆ ನಿಮಿತ್ತ ರಜಾ ಘೋಷಿಸಿದ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ತಂದಿದ್ದರು
ಕಳೆದ ಜನವರಿಯಲ್ಲಿ ಮೆಣಸಿನಕಾಯಿ ಆವಕ 1 ರಿಂದ 2 ಲಕ್ಷ ಚೀಲದ ಅಸುಪಾಸಿನಲ್ಲಿತ್ತು. ಫೆ.12 ರಂದು 2.94 ಲಕ್ಷ ಚೀಲಗಳಷ್ಟು ಆವಕವಾಗಿತ್ತು, ಆದರೆ ಇಂದು 334272 ಚೀಲ ಆವಕವಾಗಿದ್ದು. ಪ್ರಸಕ್ತ ವರ್ಷದ ಎಲ್ಲಾ ದಾಖಲೆಗಳನ್ನು ಬದಿಗೊತ್ತಿದೆ.ಮಾರುಕಟ್ಟೆಯ ಆವರಣದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಸಾಗರದಂತೆ ಮೆಣಸಿನಕಾಯಿ ಚೀಲಗಳೇ ಕಂಡು ಬಂದವು. ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಂತಾಗಿ, ರಸ್ತೆಗಳ ಮೇಲಿಟ್ಟು ಮೆಣಸಿನಕಾಯಿ ಮಾರಾಟ ಮಾಡಲು ದಲಾಲರು ಮುಂದಾದರು. ಮಾರುಕಟ್ಟೆ ಮತ್ತು ಪಟ್ಟಣದಲ್ಲಿ ಜನಜಂಗುಳಿ ಜೋರಾಗಿದ್ದು, ಹೋಟೆಲ್ ಸೇರಿದಂತೆ ವಿವಿಧ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿದವು.
ವಾಹನ ದಟ್ಟಣೆ:ಕಳೆದೆರಡು ದಿನದಿಂದ ಮಾರುಕಟ್ಟೆಗೆ ಮೂರ‍್ನಾಲ್ಕು ರಾಜ್ಯಗಳ ವಿವಿಧ ಸ್ಥಳಗಳಿಂದ ಮೆಣಸಿನಕಾಯಿ ಚೀಲಗಳನ್ನು ಹೊತ್ತು ಸಾವಿರಾರು ವಾಹನಗಳು ಆಗಮಿಸಿದ ಹಿನ್ನೆಲೆ ಮುಖ್ಯರಸ್ತೆ ಸೇರಿದಂತೆ ಮೋಟೆಬೆನ್ನೂರ, ಕಾಕೋಳ, ಕದರಮಡಲಗಿ ಗುಮ್ಮನಹಳ್ಳಿ ರಸ್ತೆ, ಮಲ್ಲೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಜಾಗವಿಲ್ಲದ ಕಾರಣ ಅನ್‌ಲೋಡ್ ಆಗದೇ ಸಾವಿರಾರು ಚೀಲಗಳು ವಾಹನದಲ್ಲಿಯೇ ಉಳಿದುಕೊಂಡವು.
ದರದಲ್ಲಿ ಸ್ಥಿರತೆ:ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ದರ ಎಂಬುದು ಮಾರುಕಟ್ಟೆಯ ವ್ಯಾಪಾರಸ್ಥರ ಧ್ಯೇಯವಾಗಿದೆ. ಆವಕ 3 ಲಕ್ಷದ ಗಡಿ ದಾಟಿದ್ದರು ಸಹ ಸರಾಸರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಉಳಿದಂತೆ ಕಡ್ಡಿ, ಡಬ್ಬಿ ಗುಂಟೂರ ತಳಿ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಮಾರುಕಟ್ಟೆ ದರ:ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ ₹2589, ಗರಿಷ್ಠ ₹41369, ಸರಾಸರಿ ₹36059, ಡಬ್ಬಿತಳಿ ಕನಿಷ್ಠ ₹3009, ಗರಿಷ್ಠ ₹52009, ಸರಾಸರಿ ₹40059, ಗುಂಟೂರು ಕನಿಷ್ಠ ₹1609, ಗರಿಷ್ಠ ₹18129, ಸರಾಸರಿ ₹14009ಗೆ ಮಾರಾಟವಾಗಿವೆ.