ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಜ.25ರಂದು ನಡೆಯಲಿರುವ ದಕ್ಷಿಣ ಭಾರತದ ದೊಡ್ಡ ಜಾತ್ರೆಯಾಗಿರುವ ಸುಕ್ಷೇತ್ರ ಬಾದಾಮಿ ಬನಶಂಕರಿದೇವಿ ಜಾತ್ರೆಗೆ ಆಗಮಿಸುವ ಸಕಲ ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಅವರು ಸಮೀಪದ ಬನಶಂಕರಿಯಲ್ಲಿ ಗಾಯತ್ರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬನಶಂಕರಿದೇವಿ ಜಾತ್ರೆಯ ಪೂರ್ವಭಾವಿ ಸಭೆಯ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾದಾಮಿಯಿಂದ ಬನಶಂಕರಿವರೆಗೆ ರಸ್ತೆಯ ಬದಿಯಲ್ಲಿರುವ ಮುಳ್ಳು ಕಂಟಿಯನ್ನು ಸ್ವಚ್ಛಗೊಳಿಸಬೇಕು. ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ಕುಡಿಯುವ ನೀರು ಸಿಗುವಂತೆ ಕ್ರಮ ವಹಿಸಬೇಕು. ಚೊಳಚಗುಡ್ಡ ಗ್ರಾಮದಲ್ಲಿ ಹೊಸ ಕೊಳವೆ ಬಾವಿ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಯವರು ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಹೆಸ್ಕಾಂ ಇಲಾಖೆಯವರು ಬನಶಂಕರಿಗೆ ಸಂಪರ್ಕ ಕಲ್ಪಿಸುವ ನಾಲ್ಕು ಭಾಗಗಳಲ್ಲಿ ಹೈಮಾಸ್ಕ್ ವಿದ್ಯುದ್ದೀಪ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.ಜಿ.ಪಂ.ಸಿಇಒ ಶಶಿಧರ ಕುರೇರ ಮಾತನಾಡಿ, ಬಾದಾಮಿಯಿಂದ ಬನಶಂಕರಿವರೆಗೆ ರಸ್ತೆಗೆ ನೀರು ಸಿಂಪಡಿಸಿ ಸ್ವಚ್ಛ ಕಾಪಾಡಿಕೊಳ್ಳಬೇಕು. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮಾಡಬೇಕು. ಮುಖ್ಯಾಧಿಕಾರಿಗಳು ಮತ್ತು ಗ್ರಾ.ಪಂ ಅಧಿಕಾರಿಗಳು ತುರ್ತು ಗಮನಹರಿಸಬೇಕು. ಆರೋಗ್ಯ ಇಲಾಖೆಯವರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಸ್ಥಳೀಯ ವೈದ್ಯರು ಮತ್ತು ಹೆಚ್ಚುವರಿ ವೈದ್ಯರನ್ನು ನಿಯೋಜನೆ ಮಾಡಿಕೊಂಡು ತುರ್ತು ಚಿಕಿತ್ಸೆ ನೀಡಲು ಸನ್ನದ್ಧರಾಗಿರಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿ:ಶಕ್ತಿ ಯೋಜನೆ ಇರುವುದರಿಂದ ಬನಶಂಕರಿ ಜಾತ್ರೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜಾತ್ರೆಯ ನಿಮಿತ್ತ ಬೇರೆ ಘಟಕದಿಂದ ಹೆಚ್ಚಿನ ಬಸ್ ತರಿಸಿಕೊಂಡು ಸಾರಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ, ತಹಸೀಲ್ದಾರ್ ಜೆ.ಬಿ.ಮಜ್ಜಗಿ, ತಾ.ಪಂ.ಇಒ ಮಲ್ಲಿಕಾರ್ಜುನ ಬಡಿಗೇರ, ಚೊಳಚಗುಡ್ಡ ಗ್ರಾ.ಪಂ ಅಧ್ಯಕ್ಷೆ ರಕ್ಷಿತಾ ಮರಡಿತೋಟದ, ಡಾ.ಎಂ.ಎಚ್.ಚಲವಾದಿ, ಟ್ರಸ್ಟ್ ಕಮಿಟಿಯ ಅಧ್ಯಕ್ಷ ಎಂ.ಎಸ್.ಪೂಜಾರ ಹಾಜರಿದ್ದರು.ಸಭೆಯಲ್ಲಿ ಬನಶಂಕರಿ ಟ್ರಸ್ಟ್ ಕಮಿಟಿ ಸದಸ್ಯರು, ಚೊಳಚಗುಡ್ಡ ಗ್ರಾ.ಪಂ ಸದಸ್ಯರು, ಹಿರಿಯರು, ಸಿಪಿಐ ಡಿ.ಡಿ.ಧೂಳಖೇಡ, ಪುರಸಭೆ ಮುಖ್ಯಾಧಿಕಾರಿ ಬಂದೇನಮಾಜ ಡಾಂಗೆ, ಬಿಇಒ ಎನ್.ವೈ.ಕುಂದರಗಿ, ಪಿ.ಎಸ್.ಐ.ನಿಂಗಪ್ಪ ಪೂಜಾರಿ, ಸಿಡಿಪಿಒ ಶಿಲ್ಪಾ ಹಿರೇಮಠ, ಪಿಡಿಒ ರವಿ ದೊಡಮನಿ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಎಂ.ಎಸ್.ಮಳಿಮಠ, ಪಶುಸಂಗೋಪನಾ ಇಲಾಖೆಯ ಶ್ರೀಕಾಂತ ಸಬನೀಸ್, ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕ ಕೆ.ಆರ್.ಚವ್ಹಾಣ, ಸೇರಿದಂತೆ ತಾಲೂಕಾಮಟ್ಟದ ಅಧಿಕಾರಿಗಳು ಹಾಜರಿದ್ದರು.