ಕುಲಾಂತರಿ ಆಹಾರ ಬೆಳೆಗೆ ಅವಕಾಶ ನೀಡಬಾರದು

| Published : Aug 31 2024, 01:41 AM IST

ಸಾರಾಂಶ

. ಈಗಾಗಲೇ ದೇಶದ ರೈತರ ಹೊಲಕ್ಕೆ ಬಿಟಿ ಹತ್ತಿ ಇಳಿಸಿ ಹಲವು ಸಂಕಷ್ಟ ಎದುರಿಸುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಮೈಸೂರು

ಕುಲಾಂತರಿ ಆಹಾರ ಬೆಳೆಗಳಿಗೆ ಯಾವುದೇ ಕಾರಣಕ್ಕೂ ದೇಶದಲ್ಲಿ ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುವ ಕುಲಾಂತರಿ ಆಹಾರ ಬೆಳೆಗೆ ಅವಕಾಶ ನೀಡಬಾರದು. ಈಗಾಗಲೇ ದೇಶದ ರೈತರ ಹೊಲಕ್ಕೆ ಬಿಟಿ ಹತ್ತಿ ಇಳಿಸಿ ಹಲವು ಸಂಕಷ್ಟ ಎದುರಿಸುತ್ತಿದ್ದೇವೆ. ಈ ನಡುವೆ ಕುಲಾಂತರಿ ಸಾಸಿವೆ ಬೆಳೆಯನ್ನು ರೈತರ ಹೊಲದಲ್ಲಿ ಬೆಳೆಸಲು ಬಹುರಾಷ್ಟ್ರೀಯ ಬೀಜ ಕಂಪನಿಗಳು ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಇದರ ವಿರುದ್ಧ ರೈತ ಸಂಘಟನೆಗಳು ಮತ್ತು ರೈತ ಕೃಷಿ ವಿಜ್ಞಾನಿಗಳು ಸುಪ್ರಿಂ ಕೋರ್ಟ್ ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದಾಗಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕರ ಆತಂಕ ಅರ್ಥ ಮಾಡಿಕೊಳ್ಳಬೇಕು. ರೈತ ಸಂಘಟನೆಗಳು, ಕೃಷಿ ವಿಜ್ಞಾನಿಗಳು, ಕಂಪನಿಗಳೊಡನೆ ಸಮಾಲೋಚಿಸಿದ ಬಳಿಕ ಈ ಸಂಬಂಧ ರಾಷ್ಟ್ರೀಯ ನೀತಿ ರೂಪಿಸಬೇಕೆಂದು ಆದೇಶಿಸಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಯಾವುದೇ ಕಾರಣಕ್ಕೂ ಕುಲಾಂತರಿ ಆಹಾರ ತಳಿಗೆ ಅವಕಾಶ ಕಲ್ಪಿಸಬಾರದು ಎಂದರು.

ಈ ಸಂಬಂಧ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಈ ತಳಿಗಳನ್ನು ನಿಷೇದಿಸಬೇಕು. ದಿನೇ ದಿನೇ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುತ್ತಿದೆ. ಹೀಗಾಗಿ ಸರ್ಕಾರ ರೈತರಿಗೆ ಉತ್ತಮ ಗುಣಮಟ್ಟದ ಬೀಜ, ನೀರು, ವಿದ್ಯುತ್ ಪೂರೈಸುವ ಜತೆಗೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ವಿಶ್ವದಲ್ಲಿ ಅತಿ ಹೆಚ್ಚು ಕೃಷಿ ಮಾಡುವ ದೇಶ ಭಾರತ. ಆದರೆ, ನಮ್ಮಲ್ಲಿ ಕೃಷಿಗೆ ಸೂಕ್ತ ಉತ್ತೇಜನ ನೀಡುತ್ತಿಲ್ಲ ಎಂದು ಅವರು ಹೇಳಿದರು.

ನೀರನ್ನು ವಾಣಿಜ್ಯ ಬಳಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಕಂಪನಿಗೆ ವಿದ್ಯುತ್ ನೀಡುತ್ತಿದ್ದಾರೆ. ಹಿಂದೆ ಸರ್ಕಾರವೇ ಗುಣಮಟ್ಟದ ಬಿತ್ತನೆ ಬೀಜ ನೀಡುತ್ತಿತ್ತು. ಈಗ ಖಾಸಗಿ ಕಂಪನಿಯವರಿಗೆ ನೀಡಿದ್ದಾರೆ. ಬಿಟಿ ಸಾಸಿವೆ ಹಿಂದೆ ವಾಣಿಜ್ಯ ಕ್ಷೇತ್ರದಲ್ಲಿತ್ತು. ಈಗ ಆಹಾರ ಕ್ಷೇತ್ರಕ್ಕೆ ಬಿಟಿ ಸಾಸಿವೆ ಕಾಲಿಟ್ಟಿದೆ. ಯಾವುದೇ ಕೃಷಿ ಯೋಜನೆಯನ್ನು ಜಾರಿ ಮಾಡುವಾಗ ರೈತರು, ಕಂಪನಿಗಳು, ವಿಜ್ಞಾನ ಸಂಸ್ಥೆಗಳ ಜತೆಗೆ ಚರ್ಚಿಸಿ ಜಾರಿ ಮಾಡಬೇಕು ಎಂದು ಅವರು ತಿಳಿಸಿದರು.

ಸಂಡೂರಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಅರಣ್ಯ ಪ್ರದೇಶಗಳಲ್ಲಿ ಗಣಗಾರಿಕೆಗೆ ಅನುಮತಿ ನೀಡಿ ಅರಣ್ಯ ನಾಶ ಮಾಡುವುದಲ್ಲದೆ ಗಿಡ ಮರ ಬೆಳೆಸಲು ರೈತರ ಭೂಮಿ ಕಬಳಿಸುತ್ತದೆ. ಬಳಿಕ ರೈತರ ಭೂಮಿಯನ್ನು ಬಿ ಕರಾಬು ಎಂದು ಘೋಷಿಸಿ ಅರಣ್ಯ ಇಲಾಖೆಗೆ ಸೇರಿಸುತ್ತದೆ. ಸರ್ಕಾರದ ಇಂತಹ ನಿರ್ಧಾರವನ್ನು ನಾವು ಖಂಡಿಸುವುದಾಗಿ ಅವರು ಹೇಳಿದರು.

ಈ ಸಂಬಂಧ ಸೆ. 4ರಂದು ಸಂಡೂರಿನಲ್ಲಿ ವಿವಿಧ ರೈತ ಸಂಘಟನೆಗಳು ಸಭೆ ನಡೆಸಲಿವೆ. ಸಂಡೂರಿನಿಂದಲೇ ನಮ್ಮ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಮಾತನಾಡಿ, ರೈತ ಚಳವಳಿ ಬಗ್ಗೆ ಸಂಸದೆ ಕಂಗನಾ ರಣಾವತ್ ಹಗುರವಾಗಿ ಮಾತನಾಡಿದ್ದಾರೆ. ರೈತರ ಬಗ್ಗೆ ಕಾಳಜಿ ಇರುವ ಯಾರೊಬ್ಬರೂ ಈ ರೀತಿ ಹೇಳಿಕೆ ನೀಡುವುದಿಲ್ಲ. ಚಳವಳಿ ಮೂಲಕವೇ ಅನೇಕ ಹೋರಾಟಗಳಿಗೆ ಜಯ ಸಿಕ್ಕಿದೆ. ಕಂಗನಾ ಅವರು ಈ ಹಿಂದೆಯೂ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಖಂಡನೀಯವಾಗಿದ್ದು, ಕೂಡಲೇ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಮರಂಕಯ್ಯ, ಮೈಸೂರು ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್ ಇದ್ದರು.