ಬ್ಯಾಡಗಿ ಪೊಲೀಸ್‌ ಠಾಣೆಗೆ ಸೌಕರ್ಯದ ಕೊರತೆ

| Published : Oct 21 2024, 12:44 AM IST

ಸಾರಾಂಶ

ಪಟ್ಟಣದ ಪೊಲೀಸ್ ಠಾಣೆ ಆಧುನಿಕ ಸೌಲಭ್ಯ, ಉಪಕರಣ ಕಾರ್ಯ ತತ್ಪರತೆಯಿಂದ ವಂಚಿತವಾಗಿದೆ. ಇತ್ತೀಚೆಗೆ ಕಳ್ಳರು ಬೇಕಾದಷ್ಟು ಅಪಡೇಟ್ ಆಗಿದ್ದಾರೆಯೇ ಹೊರತು ಪೊಲೀಸ್ ಠಾಣೆ ಮಾತ್ರ ಸೌಲಭ್ಯಗಳಲ್ಲಿದೇ ನರಳುತ್ತಿದೆ.

ಶಿವಾನಂದ ಮಲ್ಲನಗೌಡರ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಪಟ್ಟಣದ ಪೊಲೀಸ್ ಠಾಣೆ ಆಧುನಿಕ ಸೌಲಭ್ಯ, ಉಪಕರಣ ಕಾರ್ಯ ತತ್ಪರತೆಯಿಂದ ವಂಚಿತವಾಗಿದೆ. ಇತ್ತೀಚೆಗೆ ಕಳ್ಳರು ಬೇಕಾದಷ್ಟು ಅಪಡೇಟ್ ಆಗಿದ್ದಾರೆಯೇ ಹೊರತು ಪೊಲೀಸ್ ಠಾಣೆ ಮಾತ್ರ ಸೌಲಭ್ಯಗಳಲ್ಲಿದೇ ನರಳುತ್ತಿದೆ.

ಇತ್ತೀಚೆಗೆ ನಡೆದ ಕಳ್ಳತನದ ಪ್ರಕರಣಗಳನ್ನು ಭೇದಿಸಲು ಪೊಲೀಸರು ಹರಸಾಹಸ ಪಡುತ್ತಿರುವ ಕಾರ್ಯವೈಖರಿ ಬಗ್ಗೆಯೂ ಸಾರ್ವಜನಿಕರಿಂದ ಅಪಸ್ವರ ಕೇಳಿ ಬರುತ್ತಿವೆ. ಇಲಾಖೆಗೆ ಸಾಮರ್ಥ್ಯವಿದ್ದರೂ ಸೌಲಭ್ಯವಿಲ್ಲದೇ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೇನೋ ಎನ್ನುವಂತಾಗಿದೆ.

ಹೌದು, ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳು ಬಹುಶಃ ರಾಜ್ಯದೆಲ್ಲೆಡೆ ಸುದ್ದಿಯಾಗಿದ್ದು ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಮೆಟಲ್ ಟ್ರೇಸರ, ಮೆಸೆಂಜರ್ ಇನ್ನಿತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ನಟೋರಿಯಸ್ ಕಳ್ಳತನ ನಡೆಯುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಪಟ್ಟಣದ ಪೊಲೀಸ್ ಠಾಣೆ ಮಾತ್ರ ಅತ್ಯಾಧುನಿಕ ಸೌಲಭ್ಯಗಳಿಲ್ಲದೇ ನಲಗುತ್ತಿದೆ.

ಸಿಸಿ ಕ್ಯಾಮೆರಾ ಇಲ್ಲ: ಪಟ್ಟಣವನ್ನು ಪ್ರವೇಶಿಸುವ ಹಾಗೂ ಹೊರ ಹೋಗುವ ಯಾವುದೇ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಹೀಗಾಗಿ ಪಟ್ಟಣ ಪ್ರವೇಶಿಸುವ ವಾಹನಗಳ ಬಗ್ಗೆ ನಿಗಾವಹಿಸುವ ಅಥವಾ ಅಪಘಾತ, ಅನಾಹುತ ಸಂಭವಿಸಿದಾಗ ಪೊಲೀಸರು ಬಂಕಾಪುರ ಅಥವಾ ಚಳಗೇರಿ ಟೋಲ್‌ಗಳಿಗೆ ತೆರಳಬೇಕಾಗುತ್ತದೆ. ಅನಿವಾರ್ಯವಾಗಿ ಸಾರ್ವಜನಿಕರು ತಮ್ಮ ಮನೆಗಳಿಗೆ ಅಳವಡಿಸಿರುವ ಸಿಸಿ ಕ್ಯಾಮೆರಾವನ್ನೇ ನೆಚ್ಚಿಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಯಾರಿಗೂ ಬೇಡವಾದ ಬ್ಯಾಡಗಿ ರಕ್ಷಣೆ: ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದಲ್ಲಿ ಅತೀ ಹೆಚ್ಚು ಶ್ರೀಮಂತರು ವಾಸವಿದ್ದಾರೆ ಎಂಬ ಮಾಹಿತಿಯಿಂದ ಕಳ್ಳರು ಆಗಾಗ ಕಳ್ಳತನ, ದರೋಡೆ ಮಾಡುತ್ತಿದ್ದಾರೆ. ಅಂತಹ ಪ್ರಕರಣ ಪ್ರತಿ ತಿಂಗಳೂ ನಡೆಯುತ್ತಿದೆ. ಆದರೆ ಅದನ್ನು ಭೇದಿಸಲು ಅಗತ್ಯವಿರುವ ಸೌಲಭ್ಯ, ಪರಿಕರದ ಕೊರತೆ ಪೊಲೀಸ್‌ ಠಾಣೆಯಲ್ಲಿದೆ. ದಕ್ಷ ಸಿಬ್ಬಂದಿಗಳಿದ್ದಾರೆ. ಆದರೆ ಸೌಲಭ್ಯದ ಕೊರತೆ ಕೆಲವೊಮ್ಮೆ ಅವರ ಕೈ ಕಟ್ಟಿ ಹಾಕುತ್ತಿದೆ. ಅಂತೂ ಇಂತೂ ಕಾಡಿಬೇಡಿ ಪುರಸಭೆ ವತಿಯಿಂದ ಒಂದಿಷ್ಟು ಸಿಸಿ ಕ್ಯಾಮೆರಾ ಅಳವಡಿಕೆಯಾಗಿವೆ. ಆದರೆ ಅವುಗಳ ವಿದ್ಯುತ್ ಬಿಲ್, ನಿರ್ವಹಣೆ ವೆಚ್ಚ ಮಾತ್ರ ಯಾರಿಗೂ ಬೇಡವಾಗಿದೆ. ಸಿಸಿ ಕ್ಯಾಮೆರಾ ಅಳವಡಿಸಿಕೊಟ್ಟಿದ್ದೇವೆ ಅವುಗಳ ನಿರ್ವಹಣೆ ನಮ್ಮಿಂದ ಸಾಧ್ಯವಿಲ್ಲ ಎನ್ನುತ್ತಿದೆ ಪುರಸಭೆ. ಅದರ ನಿರ್ವಹಣೆಗೆ ನಮ್ಮಲ್ಲೂ ಅನುದಾನವಿಲ್ಲ ಎನ್ನುತ್ತಿದೆ ಪೊಲೀಸ್ ಇಲಾಖೆ, ಹೀಗಾಗಿ ಪಟ್ಟಣದ ರಕ್ಷಣೆ ಸದ್ಯ ಯಾರಿಗೂ ಬೇಡವಾದ ವಿಷಯವಾಗಿದೆ.

ಡಕೋಟಾ ಜೀಪ್: ಇನ್ನೂ ಪೊಲೀಸ್ ಗಸ್ತು ವಾಹನಗಳನ್ನು ಹೆಚ್ಚಳ ಮಾಡಬೇಕೆಂಬುದು ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದೆ. ಈ ಹಿಂದೆ ವರ್ತಕರ ಸಂಘ ಪೊಲೀಸರಿಗೆ ಜೀಪ್ ಕೊಡಿಸಿದ್ದನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿನ 112 ಹೊರತುಪಡಿಸಿ ಯಾವುದೇ ಗಸ್ತು ವಾಹನಗಳು ಸದರಿ ಪೊಲೀಸ್‌ ಠಾಣೆಯಲ್ಲಿಲ್ಲ. ಹೀಗಾಗಿ ಪೊಲೀಸರು ತಮ್ಮ ಸ್ವಂತ ಬೈಕ್‌ಗಳಲ್ಲೇ ಗಸ್ತು ಮಾಡಬೇಕಾಗಿದೆ. ಪಿಎಸ್ಐ ಬಳಿಯಿರುವ ಜೀಪ್ ಮಾತ್ರ ತುಂಬಾ ಹಳೆಯದಾಗಿದ್ದು, ಆರೋಪಿಯ ಯಾವುದೇ ಸುಸಜ್ಜಿತ ವಾಹನವನ್ನು ಬೆನ್ನುಹತ್ತಿ ಅಡ್ಡಗಟ್ಟುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಪಟ್ಟಣದಲ್ಲೇ ರೌಂಡ್ಸ್ ಮಾಡುತ್ತಿರುವ ಪಿಎಸ್ಐ ಬೇರಡೆಗೆ ತೆರಳಬೇಕಾದರೆ ತಮ್ಮ ಸ್ವಂತ ವಾಹನವನ್ನೇ ನೆಚ್ಚಿಕೊಳ್ಳಬೇಕಾಗಿದೆ.ಯುದ್ಧ ಮಾಡಲು ಸೈನಿಕರಿದ್ದರೂ ಶಸ್ತ್ರಾಸ್ತ್ರಗಳ ಕೊರತೆ ಎದುರಿಸಬೇಕಾಗಿದೆ. ಅತ್ತ ಸಮಸ್ಯೆ ಹೇಳಿಕೊಳ್ಳಲಾಗದೇ, ಇತ್ತ ಪರಿಸ್ಥಿತಿ ಎದುರಿಸಲಾಗದ ಪೊಲೀಸ್ ಸಿಬ್ಬಂದಿಗಳು ನರಳುತ್ತಿದ್ದು, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು ಎನ್ನುವಂತಾಗಿದೆ ಎಂದು ರೈತಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.