ಮಾಜಿ ಶಾಸಕ ಸುರೇಶ್‌ಗೌಡ ಅವರು ಯಾರಿಗೂ ಅನ್ಯಾಯ ಮಾಡಿಲ್ಲ. ಯಾವೊಬ್ಬ ರೈತರಿಂದಲೂ ಹಣ ಪಡೆದು ಜಮೀನು ಮಂಜೂರು ಮಾಡಿಕೊಟ್ಟಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾರೆ. ಹಾಗಾಗಿ ಸರ್ಕಾರ ವಜಾಗೊಳಿಸಿರುವ ಆದೇಶ ಹಿಂಪಡೆದು ರೈತರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಾಜಿ ಶಾಸಕ ಸುರೇಶ್‌ಗೌಡರು ತಮ್ಮ ಅಧಿಕಾರಾವಧಿಯಲ್ಲಿ ನಿಜವಾದ ಬಡ ರೈತರಿಗೆ ಕಾನೂನು ಬದ್ಧವಾಗಿಯೇ ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ ಹೊರತು ಯಾವುದೇ ಅಕ್ರಮ ಅವ್ಯವಹಾರ ನಡೆಸಿಲ್ಲ ಎಂದು ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮೇನಕ ತಿಳಿಸಿದರು.ಪಟ್ಟಣದ ಟಿ.ಬಿ.ಬಡಾವಣೆಯ ಮಾಜಿ ಶಾಸಕ ಸುರೇಶ್‌ಗೌಡರ ಗೃಹ ಕಚೇರಿಯಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನ ಜೆಡಿಎಸ್ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ 694 ಸಾಗುವಳಿ ಪತ್ರಗಳನ್ನು ಉದ್ದೇಶ ಪೂರ್ವಕವಾಗಿಯೇ ವಜಾಗೊಳಿಸಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಸುರೇಶ್‌ಗೌಡ ಅವರು ಯಾರಿಗೂ ಅನ್ಯಾಯ ಮಾಡಿಲ್ಲ. ಯಾವೊಬ್ಬ ರೈತರಿಂದಲೂ ಹಣ ಪಡೆದು ಜಮೀನು ಮಂಜೂರು ಮಾಡಿಕೊಟ್ಟಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾರೆ. ಹಾಗಾಗಿ ಸರ್ಕಾರ ವಜಾಗೊಳಿಸಿರುವ ಆದೇಶ ಹಿಂಪಡೆದು ರೈತರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡರ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಅವರು ಅವಾಚ್ಯ ಶಬ್ದ ಬಳಸಿದ್ದರಿಂದ ಜೆಡಿಎಸ್ ಕಾರ್ಯಕರ್ತ ಚೇತನ್ ಪತ್ರಿಕಾಗೋಷ್ಠಿ ನಡೆಸಿ ರಾಜೇಶ್‌ಗೆ ಪ್ರತ್ಯುತ್ತರ ನೀಡಿದ್ದರು. ಈ ಸಂಬಂಧ ದೂರು ಸ್ವೀಕರಿಸಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ನಮ್ಮ ಪಕ್ಷದ ಕಾರ್ಯಕರ್ತ ಚೇತನ್ ಅವರನ್ನು ಠಾಣೆಗೆ ಕರೆಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಅವರಲ್ಲಿ ಕ್ಷಮೆಯಾಚಿಸುವಂತೆ ಹೆದರಿಸಿ ಬೆದರಿಸಿ ವೀಡಿಯೋ ಮಾಡಿಸಿ ಸಾಮಾಜಿಕ ಜಾಲತಾಣಕ್ಕೆ ಹಾಕಿಸಿದ್ದಾರೆಂದು ಆರೋಪಿಸಿದರು.
ತಾಲೂಕಿನಲ್ಲಿ ರಾಜಕೀಯ ದ್ವೇಷ ಹಾಗೂ ಅಧಿಕಾರ ದುರ್ಬಳಕೆ ಮಿತಿ ಮೀರಿದೆ. ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಜೆಡಿಎಸ್ ಕಾರ್ಯಕರ್ತರ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್ ದೌರ್ಜನ್ಯ ಎಸಗುತ್ತಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಮೇಲ್ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಂಡಿಗನವಿಲೆ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷೆ ಸುನಿತ, ಬೆಳ್ಳೂರು ಹೋಬಳಿ ಘಟಕದ ಅಧ್ಯಕ್ಷೆ ಸುನಿತ ಇದ್ದರು.