ಸಾರಾಂಶ
ರಾಜ್ಯದಲ್ಲಿ 90ರ ದಶಕದಿಂದ ಈವರೆಗೆ ಆಳಿದ ಯಾವುದೇ ಸರ್ಕಾರಗಳು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿಲ್ಲ. ಕೇವಲ ಆಶ್ವಾಸನೆ ನೀಡಿಕೊಂಡೇ ಅಧಿಕಾರಾವದಿ ಪೂರ್ಣಗೊಳಿಸಿಕೊಂಡು ಬರುತ್ತಿವೆ. ಕಳೆದ 3 ದಶಕದಿಂದ ಭೂ ರಹಿತ ಕೃಷಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಳೆ ಪರಿಹಾರದ ಹಣ ಬಿಡುಗಡೆ, ಬಗರ್ ಹುಕುಂ ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಶುಕ್ರವಾರ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ನಂತರ ದ್ವಿಚಕ್ರ ವಾಹನಗಳ ಮೂಲಕ ಹಳೆ ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಬರೈತರಿಗೆ ಬೆಳೆ ಹಾನಿ ಪರಿಹಾರದ ಹಣ ಬಿಡುಗಡೆಗೆ ತಕ್ಷಣವೇ ಶಿಫಾರಸ್ಸು ಪತ್ರ ನೀಡಬೇಕು. ಸಂಕಷ್ಟದಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರಗಳು ಹೊಣೆಗೇಡಿತನ ಪ್ರದರ್ಶಿಸುತ್ತಿರುವುದು ದುರಂತ. ತಕ್ಷಣವೇ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡುವ ಕೆಲಸ ಮಾಡಲಿ ಎಂದರು.ರಾಜ್ಯದಲ್ಲಿ 90ರ ದಶಕದಿಂದ ಈವರೆಗೆ ಆಳಿದ ಯಾವುದೇ ಸರ್ಕಾರಗಳು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿಲ್ಲ. ಕೇವಲ ಆಶ್ವಾಸನೆ ನೀಡಿಕೊಂಡೇ ಅಧಿಕಾರಾವದಿ ಪೂರ್ಣಗೊಳಿಸಿಕೊಂಡು ಬರುತ್ತಿವೆ. ಕಳೆದ 3 ದಶಕದಿಂದ ಭೂ ರಹಿತ ಕೃಷಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ. ಅನೇಕ ಪಕ್ಷಗಳು ಅಧಿಕಾರಕ್ಕೆ ಬರುವ ಮುನ್ನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದಾಗಿ ಕಡೆಗಣಿಸುತ್ತಾ ಬಂದಿವೆ ಎಂದು ದೂರಿದರು.
ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಮಾತನಾಡಿ ಜಿಲ್ಲೆಯ ಜೀವನಾದಿ ಭದ್ರಾ ಅಣೆಕಟ್ಟೆಯಿಂದ ಭದ್ರಾ ನಾಲೆಯಲ್ಲಿ ನೀರು ಹರಿಸುವ ಹೊಸ ವೇಳಾಪಟ್ಚಿಯನ್ನು ರದ್ಧುಪಡಿಸಬೇಕು. ಎಡ ಮತ್ತು ಬಲ ದಂಡೆ ನಾಲೆಗಳಿಗೆ ಡ್ಯಾಂನ ಇತಿಹಾಸದಲ್ಲೇ ಮೊದಲ ಬಾರಿ ಗೆ ತಂದ ವೇಳಾಪಟ್ಟಿ ತಡೆ ಹಿಡಿದು, ಮುಂಚಿನದಂತೆ 74 ದಿನ ನಾಲೆಗಳಿಗೆ ನೀರು ಹರಿಸಬೇಕು. ಭದ್ರಾ ನೀರು ನಮ್ಮ ಹಕ್ಕು. ಈ ಹಿನ್ನೆಲೆಯಲ್ಲಿ ಫೆ.1ರಿಂದ 20 ದಿನ ನೀರು ಹರಿಸಿ, 10 ದಿನ ನಿಲ್ಲಿಸಬೇಕು. ಮಾರ್ಚ್‌ನಲ್ಲಿ 20 ದಿನ ಹಾಗೂ ಏಪ್ರಿಲ್‌ನಲ್ಲಿ 20 ದಿನಗಳ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. ಭದ್ರಾ ಅಚ್ಚುಕಟ್ಟು ರೈತರ ವಿಚಾರದಲ್ಲಿ ಶಿವಮೊಗ್ಗ ಉಸ್ತುವಾರಿ ಸಚಿವರು, ನೀರಾವರಿ ಅಧಿಕಾರಿಗಳು ಹುಡುಗಾಟವಾಡಬಾರದು ಎಂದು ಎಚ್ಚರಿಸಿದರು.ಸಂಘದ ಮುಖಂಡರಾದ ಕುಮಾರ, ಲೋಕಾಕ್ಷಮ್ಮ, ಚೌಡಪ್ಪ, ಲಂಕೇಶ ನಾಯ್ಕ, ಮಂಜುಳಾ, ಶಾಂತವ್ವ, ವಿಜಯಮ್ಮ, ಚಂದ್ರಮ್ಮ, ಪಾಲ ನಾಯಕ, ಹನುಮಂತಪ್ಪ, ಭಗತ್ ಸಿಂಗ್, ತಿಪ್ಪೇಶ ಇತರರು ಇದ್ದರು.