ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನಲ್ಲಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜ.17ರಂದು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸಾಗುವಳಿದಾರರ ಸಮಾವೇಶ ನಡೆಸಲಾಗುವುದೆಂದು ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಭೂಮಿ ಸಾಗುವಳಿದಾರರಿದ್ದಾರೆ. ಪ್ರತಿಯೊಬ್ಬರಿಗೂ ಹಕ್ಕುಪತ್ರ ಕೊಡಬೇಕೆಂದು ಸರ್ಕಾರ ಆಗ್ರಹಿಸುವುದಕ್ಕಾಗಿ ನಡೆಯಲಿರುವ ಸಮಾವೇಶದಲ್ಲಿ ಸ್ಥಳೀಯ ಶಾಸಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.ಹಕ್ಕುಪತ್ರಕ್ಕಾಗಿ ಜಿಲ್ಲೆಯಲ್ಲಿ 1 ಲಕ್ಷ 20 ಸಾವಿರ ರು. ಅರ್ಜಿಗಳನ್ನು ಸಲ್ಲಿಸಲಾಗಿದೆ. ಅರಣ್ಯ ಹಕ್ಕು ಕಾಯಿದೆಯಡಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಬೇಕು. ಕೆಲವು ಗೊಂದಲಗಳಿರುವುದರಿಂದ ಮುಖ್ಯಮಂತ್ರಿ ಜೊತೆ ಸಭೆ ನಡೆಸಿ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡುವಂತೆ ಗಮನ ಸೆಳೆಯಲಾಗುವುದು. ಚಿತ್ರದುರ್ಗ ಶಾಸಕರು ಹಾಗೂ ಜಿಲ್ಲಾಧಿಕಾರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹಕ್ಕುಪತ್ರಗಳನ್ನು ವಿತರಿಸಬೇಕು. ಯಾರ ಅರ್ಜಿಯನ್ನು ನಿರ್ಲಕ್ಷಿಸಬಾರದು. ಪ್ರತಿ ವಾರಕ್ಕೊಮ್ಮೆ ತಹಸೀಲ್ದಾರ್ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಇದುವರೆಗೂ ಒಂದು ಸಭೆಯೂ ನಡೆದಿಲ್ಲವೆಂದು ಕುಮಾರ್ ಸಮತಳ ಆಪಾದಿಸಿದರು.
ಸರ್ಕಾರಿ ಹಾಗೂ ಇತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತ ಫಾರಂ ನಂ 50, 53 ಹಾಗೂ 57 ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿಗಳ ಮಂಜೂರಾತಿ ನೀಡಬೇಕು. ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಗಳ ವಿಂಗಡಣೆ ಮಾಡಿ ಸರ್ವೆ ಮಾಡುವ ಮೂಲಕ ಗೊಂದಲ ನಿವಾರಿಸಬೇಕು. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಅರಣ್ಯ ಹಕ್ಕು ಕಾಯ್ದೆಯನ್ವಯ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.94 ಸಿ, 94 ಸಿಸಿ ಅರ್ಜಿಗಳನ್ವಯ ಮತ್ತು ವಸತಿಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ವಸತಿ ರಹಿತರಿಗೆ ನಿವೇಶನ ಮತ್ತು ಮನೆಗಳ ಮಂಜೂರಾತಿ ನೀಡಲು ಕ್ರಮ ಜರುಗಿಸಬೇಕು. ಬಡವರನ್ನು ಭೂಮಿಯಿಂದಾಗಲಿ, ವಾಸಿಸುವ ಜಾಗದಿಂದಾಗಲಿ ಒತ್ತುವರಿ ಹೆಸರಿನಲ್ಲಿ ಒಕ್ಕಲೆಬ್ಬಿಸಬಾರದು. ಅನಿವಾರ್ಯವಾಗಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕ್ರಮಕೈಗೊಳ್ಳಬಾರದು. ಭೂಮಿ-ವಸತಿ ಮಂಜೂರಾತಿಗಳು ಕಾಲ ಮಿತಿಯೊಳಗೆ ಬಗೆಹರಿಯಬೇಕು ಎಂದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಮುಖಂಡ ಸತ್ಯಪ್ಪ ಮಲ್ಲಾಪುರ, ಹನುಮಂತಣ್ಣ ಗೋನೂರು, ಕರಿಯಪ್ಪ ಈಚಘಟ್ಟ, ಈರಜ್ಜ, ಸುನಂದಮ್ಮ, ಎಚ್.ವೆಂಕಟೇಶ್ ಹಾಜರಿದ್ದರು.