ಸಾರಾಂಶ
ಸುಮಾರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಾಗುವಳಿ ಮಾಡುತ್ತಿರುವ ಭೂಹೀನ ಕಡು ಬಡ ರೈತರಿಗೆ ಹಕ್ಕುಪತ್ರವನ್ನು ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆದರೆ, ಇಲ್ಲಿಯ ವರೆಗೂ ಆಳಿರುವ ಎಲ್ಲಾ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ.
ಧಾರವಾಡ:
ಬಗರ್‌ಹುಕುಂ ರೈತರಿಗೆ ಹಕ್ಕುಪತ್ರವನ್ನು ಕೊಡುವುದೆಂದರೆ ಅದು ಭಿಕ್ಷೆ ಅಥವಾ ಕೃಪೆ ಅಲ್ಲ. ಇದು ಶಾಸನಬದ್ಧವಾಗಿ ರೈತರಿಗೆ ಸರ್ಕಾರವು ಕೊಡಬೇಕಾಗಿರುವ ಹಕ್ಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಮ್‌ಎಸ್) ರಾಜ್ಯ ಕಾರ್ಯದರ್ಶಿ ಬಿ. ಭಗವಾನ್ ರೆಡ್ಡಿ ನುಡಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಘಟನೆಯಿಂದ ರಾಜ್ಯಮಟ್ಟದಲ್ಲಿ ಸಂಘಟಿಸಲಾದ ‘ಬಗರ್ ಹುಕುಂ ರೈತರ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಬೆಳಗಾವಿ ಚಲೋ’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸುಮಾರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಾಗುವಳಿ ಮಾಡುತ್ತಿರುವ ಭೂಹೀನ ಕಡು ಬಡ ರೈತರಿಗೆ ಹಕ್ಕುಪತ್ರವನ್ನು ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆದರೆ, ಇಲ್ಲಿಯ ವರೆಗೂ ಆಳಿರುವ ಎಲ್ಲಾ ಸರ್ಕಾರಗಳು ಈಗಾಗಲೇ ರೈತರ ಅಧೀನದಲ್ಲಿರುವ ಭೂಮಿಗೆ ಶಾಸನಬದ್ಧ ಹಕ್ಕನ್ನು ಕೊಡುವ ಬದಲು ಶ್ರೀಮಂತ ಉದ್ದಿಮೆಪತಿಗಳಿಗೆ ಹಾಗೂ ಬಂಡವಾಳಿಗರಿಗೆ ಸಾವಿರಾರು ಎಕರೆ ಭೂಮಿ ಕೊಡುತ್ತಿರುವುದು ಅತ್ಯಂತ ಖಂಡನೀಯ ಎಂದು ಸರ್ಕಾರವನ್ನು ಉಗ್ರವಾಗಿ ಟೀಕಿಸಿದರು.ಫೆ. ೨೫ರಂದು ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ‘ಬಗರ್ ಹುಕುಂ ರೈತರ ವಿಧಾನ ಸೌಧ ಚಲೋ’ ಚಳವಳಿ ಘೋಷಿಸಿ ಈ ನಿಟ್ಟಿನಲ್ಲಿ ರಾಜ್ಯದ ಲಕ್ಷಾಂತರ ಜನ ಬಗರ್ ಹುಕುಂ ಸಾಗುವಳಿದಾರರು ಒಂದಾಗಿ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸಂಘರ್ಷವನ್ನು ತೀವ್ರಗೊಳಿಸಬೇಕೆಂದು ಕರೆ ನೀಡಿದರು.
ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಸ್.ಎನ್. ಸ್ವಾಮಿ ಇದ್ದರು. ಮನವಿಪತ್ರವನ್ನು ಮುಖ್ಯಮಂತ್ರಿಗಳ ರಾಜಕೀಯ ಆಪ್ತ ಸಲಹೆಗಾರ ಬಿ.ಆರ್. ಪಾಟೀಲ್ ಸ್ವೀಕರಿಸಿದರು.