ಸಾರಾಂಶ
ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡದೇ ವಿಳಂಬ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪೊರಕೆ ಹಿಡಿದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಗದಗ: ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡದೇ ವಿಳಂಬ ಧೋರಣೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪೊರಕೆ ಹಿಡಿದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರು ಆಲಿಸುತ್ತಿಲ್ಲ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಹೋರಾಟ ಆರಂಭಿಸಿ 18 ದಿನಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ನಮ್ಮ ಬೇಡಿಕೆ ಆಲಿಸಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ಇಂದಿನವರೆಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆಯೊಂದಿಗೆ ನಮ್ಮ ಹೋರಾಟಕ್ಕೆ ಸಹಕಾರ ನೀಡಿದೆ. ಆದರೆ ಇನ್ನು ಎರಡು ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಬಂದು ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದರೆ ಹೋರಾಟ ಉಗ್ರ ರೂಪ ತಾಳುವುದು ಖಚಿತ. ಮುಂದೆ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ನೀವು ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆಯಲ್ಲಿ ಮಹಿಳೆಯರು ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಧನ್ನುರಾಮ ತಂಬೂರಿ, ರಮೇಶ ಮಜ್ಜೂರ, ಚಂಬಣ್ಣ ಪರಸಾಪೂರ, ಶಾಂತವ್ವ ನಾಗಾವಿ, ಶಶಿಕಲಾ ಆಮಟೆ, ಸೋಮನಾಥ ಪೂಜಾರ, ನಬಿಸಾಬ ನದಾಫ, ಈಶಪ್ಪ ಕಡಕೋಳ, ದ್ಯಾಮಣ್ಣ ಲಮಾಣಿ, ಪರಶುರಾಮ ಜಲ್ಲಿಗೇರಿ, ಫಿರೋಜ್ ನದಾಫ್, ಖಾದೀರ್ ಸಾಬ್, ಮಹಮ್ಮದ್ ಶಲವಡಿ ಸೇರಿದಂತೆ ಅನೇಕ ರೈತರು, ಮಹಿಳೆಯರು ಭಾಗವಹಿಸಿ ಅರಣ್ಯ ಅವಲಂಬಿತ ಬಗರಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ಸತತ 19 ದಿನಗಳಿಂದ ಬಗರಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಈಗಾಗಲೇ, ದೀಡ್ ನಮಸ್ಕಾರ, ಪೊರಕೆ ಚಳವಳಿ ನಡೆಸಿದ್ದು ಸೆ 6ರ ಶನಿವಾರ ನಗರದ ಮುಳುಗುಂದ ನಾಕಾದಿಂದ ಜಿಲ್ಲಾಡಳಿತ ಭವನದ ವರೆಗೂ ರೈತರೆಲ್ಲ ಸೇರಿ ಸಾಮೂಹಿಕ ಉರುಳು ಸೇವೆಗೆ ನಿರ್ಧರಿಸಲಾಗಿದೆ ಎಂದು ಹೋರಾಟಗಾರ ರವಿಕಾಂತ ಅಂಗಡಿ ಹೇಳಿದರು.