ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಿಪಟೂರು ಉಪವಿಭಾಗದ ವ್ಯಾಪ್ತಿಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ, ದುರಸ್ತಿ ಹಾಗೂ ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯಿಂದ ನಗರದ ಕೆಂಪಮ್ಮ ದೇವಿ ದೇವಸ್ಥಾನದಿಂದ ತಾಲೂಕು ಆಡಳಿತಸೌಧದವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆಯ ಗ್ರೇಡ್- 2 ತಹಸೀಲ್ದಾರ್ ಜಗನ್ನಾಥ್‌ರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ತಿಪಟೂರು ಉಪವಿಭಾಗದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕಿನಾದ್ಯಂತ ನೂರಾರು ಗ್ರಾಮಗಳ ಸಾವಿರಾರು ರೈತರು, ಕೃಷಿ ಕೂಲಿಕಾರರು, ದಲಿತರು 40- 50 ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಹಲವು ಸಾಗುವಳಿದಾರರು ಲಕ್ಷಾಂತರ ರು. ಖರ್ಚು ಮಾಡಿ ಕೊಳವೆ ಬಾವಿಗಳನ್ನು ಹಾಕಿಸಿ, ವಿದ್ಯುತ್ ಸಂಪರ್ಕಗಳನ್ನು ಪಡೆದು ತೆಂಗಿನ ತೋಟಗಳ ಜೊತೆ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೆಲವು ಸಾಗುವಳಿದಾರರಿಗೆ ಸಾಗುವಳಿ ಸಕ್ರಮ ಚೀಟಿಗಳು ಸಿಕ್ಕಿದ್ದರೂ ಒಕ್ಕಲೆಬ್ಬಿಸುವ ಅಕ್ರಮಣಗಳಿಗೆ ತುತ್ತಾಗಿದ್ದಾರೆ. ಇನ್ನೂ ಸಾವಿರಾರು ರೈತರು ಫಾರಂ ನಂ.50, 53, 57 ಅರ್ಜಿಗಳನ್ನು ಹತ್ತಾರು ವರ್ಷಗಳಿಂದ ಭೂ ಮಂಜೂರಾತಿ ಸಮಿತಿಗಳ ಮುಂದೆ ಸಲ್ಲಿಸಿದರೂ ರೈತರಿಗೆ ಹಕ್ಕು ಪತ್ರಗಳನ್ನು ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಹಕ್ಕುಪತ್ರಗಳಿಗೆ ದುರಸ್ತಿ ಕಾರ್ಯ ಮಾಡಬೇಕು. ಶೇಂದಿವನ ಜಮೀನುಗಳನ್ನು ಕಂದಾಯ ಭೂಮಿಯಾಗಿ ಬದಲಾಯಿಸಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಎಂ.ಕೆ. ಸುಬ್ರಹ್ಮಣ್ಯ ಮಾತನಾಡಿ, ಬಗರ್ ಹುಕ್ಕುಂ ಸಾಗುವಳಿದಾರ ರೈತರು ಕಳೆದ 30 ರಿಂದ 40 ವರ್ಷಗಳಿಂದ ಕೃಷಿಗೆ ಒಳಪಟ್ಟು ಸ್ವಾಧೀನದಲ್ಲಿ ಇದ್ದರೂ ಕಂದಾಯ ಇಲಾಖೆಯ ರೈತರ ಪಹಣಿಯಲ್ಲಿ ಅರಣ್ಯ ಭೂಮಿಗಳು ಎಂದು ದಾಖಲಾಗಿರುವ ಕಾರಣದಿಂದ ರೈತರಿಗೆ ಭೂಮಿಗಳನ್ನು ಸಕ್ರಮ ಮಾಡಲಾಗುತ್ತಿಲ್ಲ. ಈ ನಡುವೆ ಅರಣ್ಯ ಇಲಾಖೆಯವರು ದಿಢೀರನೇ ಪ್ರತ್ಯಕ್ಷವಾಗಿ ಈ ಭೂಮಿಗಳು ನಮ್ಮ ಇಲಾಖೆಗೆ ಸೇರಿದ್ದು ಎಂದು ದಬ್ಬಾಳಿಕೆ ಮಾಡಿ ಹಲವಾರು ರೈತರ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ರೈತರನ್ನು ಬೆದರಿಸಿ ಒಕ್ಕಲೆಬ್ಬಿಸುವದನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆ ನಡೆಸಿದರು.ಚಿಕ್ಕನಾಯಕನಹಳ್ಳಿ ತಾಲೂಕು ಉಪಾಧ್ಯಕ್ಷ ಯಲ್ಲಪ್ಪ ಮಾತನಾಡಿ, 30 ರಿಂದ 40 ವರ್ಷಗಳಿಂದ ಅಡಿಕೆ, ತೆಂಗು ಬೆಳೆಗಳ ಸಾಗುವಳಿ ಮಾಡಿ ಜೀವನ ಸಾಗಿಸಲಾಗುತ್ತಿದೆ. ಅದರೆ ಅರಣ್ಯ ಇಲಾಖೆ ದಬ್ಬಾಳಿಕೆ ಮಾಡಿ ಅಡಿಕೆ ಗಿಡಗಳನ್ನು ನಾಶ ಮಾಡಿದೆ. ಆದ್ದರಿಂದ ಅರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಸುಧಾಕರ್, ಖಜಾಂಚಿ ರಾಜಮ್ಮ, ಹಸಿರು ಸೇನೆ ರೈತ ಸಂಘದ ಸಿದ್ದಪ್ಪ, ಶಿವಣ್ಣ, ಚಂದ್ರಪ್ಪ, ಲೋಕೇಶ್, ಕೊಟ್ಟರಪ್ಪ, ಶಂಕರಪ್ಪ, ಉಮೇಶ್, ಚಿಕ್ಕಣ್ಣ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ನೂರಾರು ರೈತರು ಭಾಗವಹಿಸಿದ್ದರು.