ತಾಲೂಕಿನ ಅಂಬಾರಗೋಡ್ಲು ಸಮೀಪದ ಮುರಕ್ಕಿ ಗ್ರಾಮದ ಯೋಗರಾಜ್ ಎಂಬುವವರ ಬಗರ್‌ಹುಕುಂ ಜಮೀನನ್ನು ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೆ ತೆರವುಗೊಳಿಸುವ ಜೊತೆಗೆ ಕುಟುಂಬಕ್ಕೆ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಪಟ್ಟಂತೆ ಅಂಬಾರಗೋಡ್ಲು ಅರಣ್ಯ ಇಲಾಖೆ ಕಚೇರಿ ಎದುರು ಬಿಜೆಪಿ ವತಿಯಿಂದ ಮಾಜಿ ಸಚಿವ ಎಚ್.ಹಾಲಪ್ಪ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಅಂಬಾರಗೋಡ್ಲು ಸಮೀಪದ ಮುರಕ್ಕಿ ಗ್ರಾಮದ ಯೋಗರಾಜ್ ಎಂಬುವವರ ಬಗರ್‌ಹುಕುಂ ಜಮೀನನ್ನು ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೆ ತೆರವುಗೊಳಿಸುವ ಜೊತೆಗೆ ಕುಟುಂಬಕ್ಕೆ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಪಟ್ಟಂತೆ ಅಂಬಾರಗೋಡ್ಲು ಅರಣ್ಯ ಇಲಾಖೆ ಕಚೇರಿ ಎದುರು ಬಿಜೆಪಿ ವತಿಯಿಂದ ಮಾಜಿ ಸಚಿವ ಎಚ್.ಹಾಲಪ್ಪ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಮಾತನಾಡಿ, ಕ್ಷೇತ್ರವ್ಯಾಪ್ತಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನಿರ್ಲಕ್ಷ್ಯ ನೀತಿಯೇ ರೈತರನ್ನು ಸತಾಯಿಸಲು ಕಾರಣವಾಗಿದೆ. ನಾನು ಶಾಸಕನಾಗಿದ್ದಾಗ ಒಬ್ಬ ರೈತನನ್ನು ಒಕ್ಕಲೆಬ್ಬಿಸಿರಲಿಲ್ಲ. ಈಗಲೂ ಅದೇ ಕಾಯ್ದೆ ಇದೆ, ಯಾವುದೇ ಕಾನೂನು ತಿದ್ದುಪಡಿ ಆಗಿಲ್ಲ. ಆದರೂ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಅಂಬಾರಗೋಡ್ಲು ಸಮೀಪದ ಮೂರಕ್ಕಿ ಗ್ರಾಮದ ಯೋಗರಾಜ್ ಅವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ತರಾಗಿದ್ದು, ಅನೇಕ ವರ್ಷಗಳಿಂದ ಇಲ್ಲಿ ವಾಸವಿದ್ದಾರೆ. ಆದರೆ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಸಹ ನೀಡದೆ ಏಕಾಏಕಿ ಬಂದು ಕುಟುಂಬಕ್ಕೆ ತೊಂದರೆ ಕೊಟ್ಟು ಬೇಲಿಯನ್ನು ಕಿತ್ತು ಹಾಕಿದ್ದಾರೆ. ಮನೆಯಲ್ಲಿದ್ದ ಹೆಂಗಸರಿಗೆ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ತ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡಬೇಕು ಎಂದರು.ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ಯೋಗರಾಜ್ ಕುಟುಂಬ ತಮ್ಮ ಸ್ವಾಧೀನದಲ್ಲಿ ಇರುವ ಜಮೀನಿನಲ್ಲಿ ವಾಸವಿದ್ದಾರೆ. ಒಕ್ಕಲೆಬ್ಬಿಸುವ ಮೊದಲು ನೋಟಿಸ್ ನೀಡಬೇಕು ಎನ್ನುವ ಕನಿಷ್ಟ ಜ್ಞಾನ ಅರಣ್ಯ ಇಲಾಖೆಗೆ ಇಲ್ಲವಾಗಿದೆ. ತಾಲೂಕಿನಲ್ಲಿ ಬೇರೆಬೇರೆ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ಹಿಂದೆ ಬೇರೆ ಷಡ್ಯಂತ್ರ ಅಡಗಿದೆ. ರೈತರ ಜಮೀನಿಗೆ ಕಾಡುಪ್ರಾಣಿಗಳಿಂದ ವ್ಯಾಪಕ ಹಾನಿಯಾಗುತ್ತಿದೆ. ಇದರ ಬಗ್ಗೆ ಗಮನ ಹರಿಸದ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಶಾಸಕರ ಆಪ್ತ ಸಹಾಯಕ ಫೋನ್ ಮಾಡಿದ್ದಾನೆ ಎಂದು ಯೋಗರಾಜ್ ಅವರ ಜಮೀನಿಗೆ ಹಾಕಿದ್ದ ಬೇಲಿಯನ್ನು ಕಿತ್ತು ಹಾಕಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ತ ಅರಣ್ಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಮಲೆನಾಡು ರೈತ ಹೋರಾಟ ವೇದಿಕೆ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿದರು. ರತ್ನಾಕರ ಹೊನಗೋಡು, ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ ಪ್ರಸಾದ್, ಸುಧೀಂದ್ರ, ನಾಗರಾಜ್ ಬೊಬ್ಬಿಗೆ ಮಂಜಯ್ಯ ಜೈನ್, ಅರುಣ ಕುಗ್ವೆ, ಪರಶುರಾಮ್, ವಿನೋದ್ ರಾಜ್, ಕೆ.ಜಿ.ಪ್ರಶಾಂತ್, ಶಾಂತಪ್ಪ ಗೌಡ, ರಾಜೇಂದ್ರ, ಸುವರ್ಣ ಟೀಕಪ್ಪ, ರೂಪ, ಗಿರೀಶ್ ಗೌಡ ಇನ್ನಿತರರು ಹಾಜರಿದ್ದರು. ಅರಣ್ಯಾಧಿಕಾರಿಗಳು ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.