ಮಡಿಕೇರಿ ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ.ಸೋಮೇಶ್ ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗಂಗೆಯನ್ನು ಧರೆಗಿಳಿಸಿ ಗಂಗಾ ನದಿಯನ್ನಾಗಿಸಿ ಜನರ ನೀರಿನ ದಾಹ ತೀರಿಸಿದ ಭಗೀರಥರು ಪ್ರಯತ್ನ ಶೀಲತೆಯ ರೂಪಕವಾಗಿ ನಿಲ್ಲುತ್ತಾರೆ. ಅತ್ಯಂತ ಕಠಿಣವಾದ ಅಥವಾ ಅಸಾಧ್ಯವೆನಿಸುವ ಕಾರ್ಯವನ್ನು ಅಚಲವಾದ ಛಲ ಮತ್ತು ನಿರಂತರ ಪರಿಶ್ರಮದಿಂದ ಸಾಧಿಸುವ ಭಗೀರಥ ಅವರ ಪ್ರಯತ್ನದ ಮೂಲಕ ಯುವ ಸಮೂಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಕುಶಾಲನಗರದ ಬಿ.ಸಿ.ಶಂಕರಯ್ಯ ಅವರು ಉಪನ್ಯಾಸ ನೀಡಿ, ಭಗೀರಥನು ಪೌರಾಣಿಕ ರಾಜ. ತನ್ನ ಪೂರ್ವಜರ ಭೀಕರ ಅಂತ್ಯವನ್ನು ತಿಳಿದು, ತನ್ನ ಪೂರ್ವಜರಿಗೆ ಸದ್ಗತಿ ಪ್ರಾಪ್ತಿಯಾಗಲಿಲ್ಲವೆಂಬ ವಿಷಾದದಿಂದ ತನ್ನ ಮಂತ್ರಿಗೆ ತನ್ನ ರಾಜ ಕರ್ತವ್ಯ ವಹಿಸಿ ಹಿಮಾಲಯದಲ್ಲಿ ತಪಸ್ಸಿಗೆ ಹೋದನು ಎಂದು ಹೇಳಲಾಗುತ್ತದೆ. ಗಂಗೆಯು ನೇರವಾಗಿ ಭೂಮಿಗೆ ಇಳಿದರೆ ತನ್ನ ಬಲವು ಭೂಮಿ ನಾಶಪಡಿಸುತ್ತದೆ ಎಂದು ಗಂಗಾ ಭಗೀರಥನಿಗೆ ಹೇಳಿದಳು. ನೀಲ ಕಂಠನಾದ ಶಿವನ ಬಳಿ ಅನುಗ್ರಹವನ್ನು ಪಡೆಯಲು ಗಂಗೆ ಸಲಹೆಯನ್ನು ಕೊಟ್ಟಳು, ಏಕೆಂದರೆ ಶಿವನನ್ನು ಹೊರತುಪಡಿಸಿ ಯಾರೂ ಸಹ ಗಂಗೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಭಗೀರಥನು ಶಿವನನ್ನು ಕುರಿತು ತೀವ್ರ ತಪಸ್ಸು ಮಾಡಿದನು ಮತ್ತು ಗಂಗೆಯನ್ನು ಭೂಮಿಗೆ ಇಳಿಸುವಂತೆ ಕೇಳಿದನು. ಶಿವನು ಅವನಿಗೆ ವರವನ್ನು ನೀಡಿದನು, ಇದು ಅಂತಿಮವಾಗಿ ಗಂಗಾ ದೇವಿಯು ಗಂಗಾನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು ಎಂದು ಹೇಳಿದರು.

ದೇವರು ಕೊಟ್ಟ ಉಡುಗೊರೆ: ಭಗೀರಥ ಉಪ್ಪಾರ ಸಮಾಜದ ಗೌರವಾಧ್ಯಕ್ಷ ಬಿ.ಸಿ.ಗೋವಿಂದರಾಜು ಅವರು ಮಾತನಾಡಿ, ಯುವ ಪೀಳಿಗೆ ಪ್ರಯತ್ನಪಟ್ಟರೆ ದೇಶದ ಮುತ್ತುಗಳಾಗಬಹುದು ಎಂದು ಸಲಹೆ ನೀಡಿದರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೇಕಲ್ ನವೀನ್ ಕುಶಾಲಪ್ಪ ಮಾತನಾಡಿ, ಎಲ್ಲ ಮಹಾತ್ಮರೂ ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮಾನವರಾಗಿದ್ದಾರೆ ಎಂದರು. ಉಪ್ಪಾರ ಸಮಾಜದ ಸದಸ್ಯ ಪೃಥ್ವಿರಾಜ್ ಮಾತನಾಡಿ, ಯುವಕರು ಮಹರ್ಷಿಯವರ ತತ್ವ, ಆದರ್ಶ ಆಶಾದೀಪವಾಗಿಟ್ಟುಕೊಂಡು ಮುಂದವರಿಯಬೇಕು ಎಂದರು. ಸಮಾಜದ ಕಾರ್ಯದರ್ಶಿ ಬಿ.ಎನ್.ಜಗದೀಶ್ ಮಾತನಾಡಿ, ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗರೂಕರಾಗಬೇಕು ಎಂದು ಹೇಳಿದರು. ತಹಸೀಲ್ದಾರ್‌ ಶ್ರೀಧರ್ ಉದ್ಘಾಟಿಸಿದರು. ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ವಿ.ಗಿರೀಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮತ್ತಿತರರಿದ್ದರು.ಪ್ರೇಮ ಮತ್ತು ಬಿ.ಸಿ.ಶಂಕರಯ್ಯ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು. ಅತಿಥಿ ಗಣ್ಯರು ಶ್ರೀ ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.