ಮಡಿಕೇರಿ: ಮನೆ ಸಂಸಾರದಲ್ಲಿ ಓದು-ಬರಹದಂತಹ ಅಭ್ಯಾಸಗುಣಗಳು ಒಳ್ಳೆಯ ಸಂಸ್ಕಾರಕ್ಕೆ ದಾರಿ ತೋರಿಸಬಲ್ಲದು. ಇದರಿಂದ ಒಳ್ಳೆಯ ಸಂಸ್ಕೃತಿಯು ರೂಪುಗೊಳ್ಳುವುದೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ 8ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಮಹೇಶ್ ನಾಚಯ್ಯ, ಒಂದು ಒಳ್ಳೆಯ ಸಂಸ್ಕೃತಿಯಿಂದ ಜನರು ಒಂದು ಕುಟುಂಬದಲ್ಲಿ ಉತ್ತಮ ಪರಿಸರ ಹೊಂದಬಹುದು. ಮೊದಲು ಮನೆಯಿಂದಲೇ ಸಂಸ್ಕಾರವನ್ನು ಕಲಿಯಬೇಕು ಎಂದರು.ಯಾವುದೇ ಭಾಷೆಯಲ್ಲಿ ಪರಿಣತಿ ಹೊಂದಿದ್ದರೂ ಮುಖ್ಯ ಭಾಷೆ ಕೊಡವ ಭಾಷೆ ಮನೆಯ ವ್ಯವಹಾರಿಕ ಭಾಷೆಯಾಗಿರಬೇಕು. ಮಾತೃ ಭಾಷೆಯ ಮೇಲಿನ ಕೀಳರಿಮೆ ಸಲ್ಲದು. ಇದು ತಂದೆ-ತಾಯಿಯನ್ನು ಕಡೆಗಣಿಸಿದಂತೆ. ಕೊಡವ ಭಾಷೆಯಲ್ಲಿ ತನ್ನದೇ ಆದ ನಾಲ್ಕು ಸಾವಿರದಷ್ಟು ಮೂಲ ಶಬ್ಧಗಳಿವೆ. ಅವೆಲ್ಲದರ ಬಳಕೆಯಾದಲ್ಲಿ ಭಾಷೆಗೆ ತನ್ನತನ ಉಳಿಯಲು ಸಾಧ್ಯವಾಗುತ್ತದೆ. ಕೊಡವ ಪುಸ್ತಕ ಪತ್ತಾಯ ಅಕಾಡೆಮಿಯ ನೂತನ ಯೋಜನೆಯಾಗಿದ್ದು ಕೊಡವ ಸಮಾಜಗಳಲ್ಲಿ ಐನ್‌ಮನೆಗಳಲ್ಲಿ ಇದರ ಸ್ಥಾಪನೆಗೆ ಸಂಬಂಧಪಟ್ಟವರು ಮುಂದೆ ಬರಬೇಕಾಗಿದೆ ಎಂದರು. ನಿವೃತ್ತ ಉಪಾಧ್ಯಾಯ ಹಿರಿಯ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಮಾತನಾಡಿ, ಕೊಡವ ಅಕಾಡೆಮಿಯ ಪುಸ್ತಕ ಉತ್ತಮ ಯೋಜನೆಯಾಗಿದೆ. ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾದರೆ ಬರಹಗಾರರಿಗೂ ಇನ್ನೂ ಹೆಚ್ಚು ಬರೆಯುವ ಆಸಕ್ತಿ ಉಂಟಾಗುತ್ತದೆ ಎಂದರು.ಇಗ್ಗುತಪ್ಪ ದೇವಸ್ಥಾನ ಸಮಿತಿ ನಿರ್ದೇಶಕ ಪರದಂಡ ವಿಠಲ್ ಭೀಮಯ್ಯ ತಮ್ಮ ಮಾತಿನಲ್ಲಿ ಅಕಾಡೆಮಿಯ ನೂತನ ಯೋಜನೆಗೆ ಶುಭ ಕೋರಿದರು. ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದ 8ನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ತಮ್ಮ ಮಾತಿನಲ್ಲಿ, ಅಮ್ಮತ್ತಿ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ಅತ್ಯಂತ ಸಂತಸ ತಂದಿದೆ. ಇದರ ಸದುಪಯೋಗವನ್ನು ನಿಯಮಾವಳಿಗಳ ಅಡಿಯಲ್ಲಿ ಸಮಾಜದ ಸದಸ್ಯರಿಗೆ ನೀಡಲಾಗುವುದು ಎಂದರು. ಕುಟ್ಟಂಡ ರೀಟಾ ಚಿಣ್ಣಪ್ಪ ಪ್ರಾರ್ಥಿಸಿದರು. ಪ್ರಕಾಶ್ ಗಣಪತಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ನಿರೂಪಿಸಿದರು. ವೇದಿಕೆಯಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಚಂಬಾಂಡ ರೇಷ್ಮಾ ಭಿಮಯ್ಯ ಇದ್ದರು, ಅಕಾಡೆಮಿ ಸದಸ್ಯರಾದ ಕಂಬೆಯಂಡ ಡೀನಾ ಬೋಜಣ್ಣ, ಪಾನಿಕುಟ್ಟಿರ ಕುಟ್ಟಪ್ಪ, ಹಿರಿಯರಾದ ಕಾವಾಡಿಚಂಡ ಗಣಪತಿ, ಚಿಲ್ಲವಂಡ ಕಾವೇರಪ್ಪ, ಸಮಾಜದ ಕಾರ್ಯದರ್ಶಿ ಪಟ್ಟಡ ಧನು ಉತ್ತಯ್ಯ, ಮಾಚಿಮಂಡ ಸುರೇಶ್ ಅಯ್ಯಪ್ಪ, ನೆಲ್ಲಮಕ್ಕಡ ಸಂಪತ್ ದೇವಯ್ಯ, ಕೇಚಂಡ ಕುಶಾಲಪ್ಪ ಇತರರು ಇದ್ದರು.