ಸಾರಾಂಶ
ಕೊಪ್ಪಳ : ಬಹು ವರ್ಷಗಳಿಂದ ನಡೆಯುತ್ತಿರುವ ಬಹದ್ದೂರು ಬಂಡಿ-ನವಲಕಲ್ ಏತನೀರಾವರಿ ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಗೊಂಡಬಾಳ ಜಿಪಂ ಕ್ಷೇತ್ರ ವ್ಯಾಪ್ತಿಯ ಚುಕ್ಕನಕಲ್, ಮುದ್ದಾಬಳ್ಳಿ, ಹಳೇ ಗೊಂಡಬಾಳ, ಹೊಸ ಗೊಂಡಬಾಳ, ಹ್ಯಾಟಿ, ಮೆಳ್ಳಿಕೇರಿ, ಮುಂಡರಗಿ, ಬಿ. ಹೊಸಳ್ಳಿ, ಬಹದ್ದೂರ್ ಬಂಡಿ ಹಾಗೂ ಹೂವಿನಾಳ ಗ್ರಾಮದಲ್ಲಿ ಅಂದಾಜು ಮೊತ್ತ ₹11.77 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಬಹದ್ದೂರ್ ಬಂಡಿ-ನವಲಕಲ್ ಏತ ನೀರಾವರಿ ಗೊಂಡಬಾಳ ಭಾಗದ ಗ್ರಾಮಗಳ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಈ ಯೋಜನೆ ಜಾರಿ ಆಗಲೆಂದು ರೈತರು ಅನೇಕ ವರ್ಷಗಳ ಕಾಲ ಹೋರಾಟ ಕೂಡ ನಡೆಸಿದ್ದರು. ಅವರ ಹೋರಾಟಕ್ಕೆ ಧ್ವನಿ ಆಗಿದ್ದು, ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. 2013-18ವರೆಗಿನ ನಮ್ಮ ಆಡಳಿತದ ಅವಧಿಯಲ್ಲಿ 2018ರಲ್ಲಿ ಈ ಏತ ನೀರಾವರಿ ಯೋಜನೆಗೆ ₹188 ಕೋಟಿ ಅನುದಾನ ಮಿಸಲಿಟ್ಟ ಮಂಜೂರು ಮಾಡಿಸಿದ್ದೆವು. ಈ ಯೋಜನೆಯಿಂದ ಈ ಭಾಗದಲ್ಲಿ ಸುಮಾರು 14000-15000 ಸಾವಿರ ಎಕರೆ ನೀರಾವರಿ ಪ್ರದೇಶ ಆಗಲಿದೆ ಎಂದರು.
ಈ ಏತ ನೀರಾವರಿ ಯೋಜನೆಗೆ ಮತ್ತೆ ₹250 ಕೋಟಿ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇನೆ. ಮಂಜೂರು ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಯೋಜನೆಯಡಿ ಬಹುತೇಕ ಕಾಮಗಾರಿ ಮುಗಿದಿದ್ದು, ಕಾಲುವೆ, ಉಪ ಕಾಲುವೆ ಹಾಗೂ ಹೊಲ ಕಾಲುವೆಯ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಅದನ್ನು ಕೂಡ ಶೀಘ್ರದಲ್ಲಿ ಮುಗಿಸಿ ಮುಖ್ಯಮಂತ್ರಿಗಳಿಂದ ಈ ನೀರಾವರಿ ಯೋಜನೆಯನ್ನೂ ಲೋಕಾರ್ಪಣೆ ಮಾಡಿಸಿ, ಈ ಭಾಗದ ರೈತರಿಗೆ ಅರ್ಪಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಫೆಬ್ರವರಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ₹100-150 ಕೋಟಿ ಅನುದಾನ:
ನಮ್ಮ ಕೊಪ್ಪಳ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ಈಗಾಗಲೇ ಕ್ಷೇತ್ರದಲ್ಲಿ ₹80-100 ಕೋಟಿ ವೆಚ್ಚದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ರಸ್ತೆಗಳ ಅಭಿವೃದ್ಧಿಗೆ ಮುಂದಿನ ಫೆಬ್ರವರಿ -ಮಾರ್ಚ್ ತಿಂಗಳಿನಲ್ಲಿ ₹100 ರಿಂದ 150 ಕೋಟಿ ಅನುದಾನ ಮಂಜೂರು ಮಾಡಿಸಿ ಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಬಿ, ನಾಗನಗೌಡ ಮುಂಡರಗಿ, ವಿರುಪಣ್ಣ ನವೋದಯ, ಕೃಷ್ಣ ಇಟ್ಟಂಗಿ, ಸುರೇಶ್ ಮಾದಿನೂರು, ಶರಣಪ್ಪ ಸಜ್ಜನ್, ತೋಟಪ್ಪ ಕಾಮನೂರು, ಹನಮೇಶ್ ಹೊಸಳ್ಳಿ, ಆನಂದ ಕಿನ್ನಾಳ, ಚಾಂದ್ ಪಾಷಾ ಕಿಲ್ಲೆದರ್, ರವಿ ಕುರುಗೋಡ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಒ ದುಂದೇಶ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಸೇರಿದಂತೆ ಇತರರಿದ್ದರು.