ಸಾರಾಂಶ
ಸರ್ಕಾರದ ಅನುದಾನ ಇಲ್ಲದೆಯೇ ಊರಿನವರ ಸಹಾಯಹಸ್ತದಿಂದ ತಾಲೂಕಿನ ಬಹದ್ದೂರುಬಂಡಿ ಉತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಅ.14, 15ರಂದು ಎರಡು ದಿನಗಳ ಕಾಲ ನಡೆಯಲಿದೆ.
ಕೊಪ್ಪಳ: ಸರ್ಕಾರದ ಅನುದಾನ ಇಲ್ಲದೆಯೇ ಊರಿನವರ ಸಹಾಯಹಸ್ತದಿಂದ ತಾಲೂಕಿನ ಬಹದ್ದೂರುಬಂಡಿ ಉತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಅ.14, 15ರಂದು ಎರಡು ದಿನಗಳ ಕಾಲ ನಡೆಯಲಿದೆ.
ಮನೆ, ರಸ್ತೆ ಸ್ವಚ್ಛಗೊಳಿಸಿದ್ದಾರೆ. ಬಹದ್ದೂರುಬಂಡಿ ಕೋಟೆಯನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲಲ್ಲಿ ಬಿದ್ದಿದ್ದ ದೇವರ ಮೂರ್ತಿಗಳು, ಐತಿಹಾಸಿಕ ಪಳೆಯುಳಿಕೆಗಳನ್ನು ಜೋಡಿಸಿಟ್ಟಿದ್ದಾರೆ. ಇಡೀ ಕೋಟೆಗೆ ಕಂಗೊಳಿಸುವಂತೆ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ.ಬಹದ್ದೂರು ಬಂಡಿ ಕೋಟೆಯ ಬಳಿ ಇರುವ ಸೇವಾಲಾಲ ಭವನದ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು ಹಾಕಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.ಎರಡು ದಿನಗಳ ಕಾರ್ಯಕ್ರಮ: ಬೆಳಗ್ಗೆ 8 ಗಂಟೆಗೆ ಮೆರವಣಿಗೆ ಹಮ್ಮಿಕೊಂಡಿದ್ದು, ಗ್ರಾಪಂ ಅಧ್ಯಕ್ಷ ಯಲ್ಲಪ್ಪ ತಳವಾರ ಚಾಲನೆ ನೀಡಲಿದ್ದಾರೆ.ಡೊಳ್ಳು ಕುಣಿತ, ಕುಂಭ, ವೀರಗಾಸೆ, ಭಾಜಾಭಜಂತ್ರಿ, ಕೋಲಾಟ ಸೇರಿದಂತೆ ನಾನಾ ವಾದ್ಯವೃಂದಗಳನ್ನು ಮೆರವಣಿಗೆಯಲ್ಲಿ ಭಾಗವಹಿಸಲಿವೆ.ಬೆಳಗ್ಗೆ 11 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ, ಚೈತಾನ್ಯಾನಂದ ಸ್ವಾಮೀಜಿ, ಮುಫ್ತಿ ನಜೀರ್ ಅಹ್ಮದ್, ಜಯರಾಜ ಫಾಸ್ಟರ್, ಮಂಜುನಾಥ ಜಯಚಂದರಗಿರಿ ಸಾನ್ನಿಧ್ಯ ವಹಿಸುವರು. ಉತ್ಸವದ ಸರ್ವಾಧ್ಯಕ್ಷತೆಯನ್ನು ಹಿರಿಯ ವಕೀಲ ಎ.ವಿ. ಕಣವಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟನೆ ನೆರವೇರಿಸುವರು. ಸಮ್ಮೇಳನಾಧ್ಯಕ್ಷರ ನುಡಿಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಬಿಡುಗಡೆ ಮಾಡುವರು.ಮಧ್ಯಾಹ್ನ 2.30ಕ್ಕೆ ಬಹದ್ದೂರುಬಂಡಿ ಕೋಟೆ ಚಾರಿತ್ರಿಕ ಪರಂಪರೆ ಗೋಷ್ಠಿ, ಸಂಜೆ 4 ಗಂಟೆಗೆ ಬಹದ್ದೂರುಬಂಡಿ ಸಾಂಸ್ಕೃತಿಕ ಪರಂಪರೆ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಅ.15ರಂದು ಬೆಳಗ್ಗೆ 10.30ಕ್ಕೆ ಬಂಜಾರ ಸಮುದಾಯ ಮತ್ತು ಬಹದ್ದೂರುಬಂಡಿ ಗೋಷ್ಠಿ, ಮಧ್ಯಾಹ್ನ 12ಕ್ಕೆ ಬಹದ್ದೂರುಬಂಡಿ ಅಭಿವೃದ್ಧಿ ಚಿಂತನೆ ಗೋಷ್ಠಿ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಗ್ರಾಮದವರೆಲ್ಲರೂ ಸೇರಿ ಬಹದ್ದೂರುಬಂಡಿ ಉತ್ಸವವನ್ನು ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮೂರಿನ ಜಾತ್ರೆ ಎನ್ನುವಂತೆ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸರ್ವಾಧ್ಯಕ್ಷ ಎ.ವಿ. ಕಣವಿ ತಿಳಿಸಿದರು.ಐತಿಹಾಸಿಕ ಹಿನ್ನೆಲೆಯ ಬಹದ್ದೂರುಬಂಡಿ ಕೋಟೆಯ ಇತಿಹಾಸ ಸ್ಮರಿಸಲು ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಪೀಳಿಗೆಗೆ ಅದರ ಇತಿಹಾಸ ಪರಿಚಯಿಸುವಂತಾಗಬೇಕು ಎಂದು ಆಯೋಜಕ ಮೆಹಬೂಬ ಕಿಲ್ಲೇದಾರ ತಿಳಿಸಿದ್ದಾರೆ.