ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗಕ್ಕೆ ಲಕ್ಷಾಂತರ ಕೋಟಿ ರುಪಾಯಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣವನ್ನು ಅದೇ ಜನಾಂಗದ ಪ್ರಗತಿಗೆ ಬಳಸದಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಹಾನ್ ದ್ರೋಹವನ್ನು ಖಂಡಿಸಿ ಜುಲೈ ೨೬ರಂದು ಬಹುಜನ ಸಮಾಜ ಪಕ್ಷದಿಂದ ಹಾಸನ ಜಿಲ್ಲಾ ಕೇಂದ್ರದಲ್ಲಿ ಧರಣಿ ಮಾಡುವುದಾಗಿ ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಅನ್ವಯ ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನ ೨ ವರ್ಷಗಳಲ್ಲಿ ರು. ೨೫ ಸಾವಿರದ ೩೯೯ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ನೇರವಾಗಿ ಎಸ್‌ಸಿ /ಎಸ್‌ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ. ೨೦೧೪ರಿಂದ ಇದುವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಈ ಮೂರು ಸರ್ಕಾರಗಳು ಒಟ್ಟು ಸುಮಾರು ೭೦ ಸಾವಿರ ಕೋಟಿ ರುಪಾಯಿಗಳ ದುರ್ಬಳಕೆ ಮಾಡಿಕೊಂಡು ಮಹಾನ್ ದ್ರೋಹ ಬಗೆದಿವೆ ಎಂದು ದೂರಿದರು.
ಮೀಸಲು ಹಣವನ್ನು ದುರ್ಬಳಕೆ ಮಾಡಲು ನಾಂದಿ ಹಾಡಿದ್ದು, ಇದೇ ಕಾಂಗ್ರೆಸ್ ಸರ್ಕಾರ. ಮುಂದೆ ಬಂದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳೂ ಕೂಡ ಇದೇ ದಾರಿಯನ್ನು ಹಿಡಿದು ಎಸ್‌ಸಿ /ಎಸ್‌ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಹಿಂಜರಿಯಲಿಲ್ಲ. ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಕಾನೂನು ಜಾರಿಯಾದಾಗಿನಿಂದ ಇದೂವರೆಗೆ ಹತ್ತು ವರ್ಷಗಳಲ್ಲಿ ೨ ಲಕ್ಷದ ೫೬ ಸಾವಿರ ೧೨ ಕೋಟಿ ರು.ಗಳನ್ನು ಈ ಯೋಜನೆಗೆ ಮೀಸಲಿರಿಸಲಾಗಿದೆ. ಈ ಹಣದಿಂದ ಕರ್ನಾಟಕದ ಎಸ್‌ಸಿ/ಎಸ್‌ಟಿ ಜನಾಂಗದ ಅಭಿವೃದ್ಧಿಗೆ ಮಾಡಬಹುದಾಗಿದ್ದ ಯೋಜನೆಗಳು ಎಂದರೇ, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಎಂ.ಬಿ.ಬಿ.ಎಸ್. ಪಿಎಚ್.ಡಿ ವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಬಹುದಿತ್ತು. ಎಸ್‌ಸಿ/ಎಸ್‌ಟಿ ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು ಎಂದು ತಿಳಿಸಿದರು. ಮನೆ ಇಲ್ಲದ ಪ್ರತಿಯೊಂದು ಎಸ್‌ಸಿ/ಎಸ್‌ಟಿ ಕುಟುಂಬಗಳಿಗೂ ಸುಸಜ್ಜಿತ ಸ್ವಂತ ಮನೆ ಕಟ್ಟಿಸಿಕೊಡಬಹುದಿತ್ತು. ಭೂರಹಿತ ಈ ಜನಾಂಗದ ಕೃಷಿ ಕಾರ್ಮಿಕರಿಗೆ ತಲಾ ೫ ಎಕರೆ ಕೃಷಿ ಜಮೀನು ಖರೀದಿಸಿ ಕೊಡಬಹುದಿತ್ತು. ಎಲ್ಲಾ ರೀತಿಯ ರೋಗಿಗಳಿಗೂ ಉಚಿತವಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿ ಉಳಿಸಬಹುದಿತ್ತು. ಆದರೆ ಈ ಮೂರೂ ಪಕ್ಷದ ಸರ್ಕಾರಗಳು ಈ ಯೋಜನೆಯ ಶೇ.೧೦% ರಷ್ಟನ್ನು ಕೂಡ ಎಸ್‌ಸಿ/ಎಸ್‌ಟಿಗಳಿಗೆ ನೇರವಾಗಿ ತಲುಪಿಸದೆ ದ್ರೋಹ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎನ್‌ಸಿ /ಎಸ್‌ಟಿ ವಿದ್ಯಾರ್ಥಿಗಳು ಕೇವಲ ಟಾಪ್ ೧೦೦ ಯೂನಿವರ್ಸಿಟಿಗಳಲ್ಲಿ ಸೀಟು ಪಡೆದರೆ ಮಾತ್ರ ಸ್ಕಾಲರ್ಶಿಪ್ ಎಂಬ ಕೊಕ್ಕೆ ಹಾಕಿ ಅನ್ಯಾಯ ಮಾಡಿದೆ. ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ, ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಪ್ರಾರಂಭದಲ್ಲೇ ಪೂರ್ಣ ಶುಲ್ಕ ಪಾವತಿಸುವಂತೆ ಮಾಡಲಾಗಿದೆ. ಎರಡು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಎಸ್‌ಸಿ/ಎಸ್‌ಟಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರವು ಇಂದು ಎಸ್ಸಿ, ಎಸ್‌ಟಿಗಳಿಗೆ ಅನ್ಯಾಯ ಮಾಡಿದಾಗ ಸುಮ್ಮನಿದ್ದರೆ ನಾಳೆ ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಅನ್ಯಾಯ ಮಾಡಲು ಮುಂದಾಗುತ್ತದೆ. ಬಿಜೆಪಿ, ಜೆಡಿಎಸ್ ಇದೇ ಚಾಳಿಯನ್ನು ಮುಂದುವರೆಸುತ್ತವೆ. ಜಾತ್ಯತೀತ ಕಾಂಗ್ರೆಸ್ ಮತ್ತು ಜಾತಿವಾದಿ ಬಿಜೆಪಿ ಮತ್ತು ಜೆಡಿಎಸ್ ಒಂದೇ ದೇಹದ ಎರಡು ಕೈಗಳಿದ್ದಂತೆ. ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಂದ ಬಹುಜನರ ಉದ್ಧಾರ ಸಾಧ್ಯವಿಲ್ಲ ಎಂದು ಹೇಳಿದರು.ಬಿಎಸ್‌ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಶಿವಮ್ಮ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಸಂಯೋಜಕ ಲಕ್ಷ್ಮಣ್ ಕೀರ್ತಿ, ಎಚ್.ಬಿ.ಮಲ್ಲಯ್ಯ ಇತರರು ಇದ್ದರು.ಫೋಟೋ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್.