ಬೈಲಹೊಂಗಲ ಬಂದ್‌ ಸಂಪೂರ್ಣ ಯಶಸ್ವಿ

| Published : Mar 19 2025, 12:48 AM IST

ಸಾರಾಂಶ

ಕಿತ್ತೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡದೇ ಸರ್ಕಾರ ಅನ್ಯಾಯ ಮಾಡಿದೆಂದು ಖಂಡಿಸಿ ಕರೆದ ಬೈಲಹೊಂಗಲ ಬಂದ್‌ಗೆ ಎಲ್ಲ ವ್ಯಾಪಾರಸ್ಥರು ಸ್ಪಂದಿಸಿರುವುದರಿಂದ ಬಂದ್‌ ಶಾಂತಿಯುತವಾಗಿ ನಡೆದು ಸಂಪೂರ್ಣ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕಿತ್ತೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡದೇ ಸರ್ಕಾರ ಅನ್ಯಾಯ ಮಾಡಿದೆಂದು ಖಂಡಿಸಿ ಕರೆದ ಬೈಲಹೊಂಗಲ ಬಂದ್‌ಗೆ ಎಲ್ಲ ವ್ಯಾಪಾರಸ್ಥರು ಸ್ಪಂದಿಸಿರುವುದರಿಂದ ಬಂದ್‌ ಶಾಂತಿಯುತವಾಗಿ ನಡೆದು ಸಂಪೂರ್ಣ ಯಶಸ್ವಿಯಾಯಿತು.

ಪಟ್ಟಣದ ಚನ್ನಮ್ಮ ಸಮಾಧಿಯ ಮುಂಭಾಗದಿಂದ ಪ್ರತಿಭಟಣಾ ಬೈಕ್ ರ್‍ಯಾಲಿ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟಿಸಿ, ಸಭೆ ನಡೆಸಲಾಯಿತು. ಬಂದ ಕಾಲಕ್ಕೆ ಜನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಪ್ರತಿಭಟಣಾ ನೇತೃತ್ವ ವಹಿಸಿ ಮಾತನಾಡಿ, ಸರ್ಕಾರ ಕಿತ್ತೂರ ಅಭಿವೃದ್ಧಿ ಪ್ರಾಧಿಕಾರ ರಚಿಸಿ 17 ವರ್ಷಗಳಲ್ಲಿ ಕೇವಲ ₹42 ಕೋಟಿ ಬಿಡುಗಡೆ ಮಾಡಿದೆ. ಉಳಿದ ಪ್ರಾಧಿಕಾರಗಳಿಗೆ ಅನುದಾನ ನೀಡಿರುವುದು ಸ್ವಾಗರ್ತಾ. ಆದರೆ, ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯ ಕುರುಹುಗಳ ಅಭಿವೃದ್ಧಿಗೆ ಹಣ ನೀಡದೇ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು. ಸರ್ಕಾರ ರಾಯಣ್ಣ ಪ್ರಾಧಿಕಾರಕ್ಕೆ ಅನುದಾನ ನೀಡಿದ ಮಾದರಿಯಲ್ಲಿ ಕಿತ್ತೂರ ಪ್ರಾಧಿಕಾರಕ್ಕೂ ಅನುದಾನ ನೀಡಬೇಕು. ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿಸಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮನ ಹೆಸರಿಡಬೇಕು. ಚನ್ನಮ್ಮನ ಹೆಸರಿನಲ್ಲಿ ಅಂತರಾಷ್ಟ್ರೀಯ ಬಾಲಕೀಯರ ಸೈನಿಕ ಶಾಲೆ, ಚನ್ನಮ್ಮನ ಜೀವನ ಚರಿತ್ರೆಯ ರಾಕ್ ಗಾರ್ಡನ್‌ ನಿರ್ಮಿಸಬೇಕು. ಕಿತ್ತೂರ ಕೋಟೆ ಮರು ಸೃಷ್ಟಿ ಕಾರ್ಯವಾಗಬೇಕು. ಚನ್ನಮ್ಮನ ಎಲ್ಲ ಕುರುಹುಗಳನ್ನು ಅಭಿವೃದ್ಧಿ ಪಡಿಸಬೇಕು. ಮಲ್ಲಮ್ಮ ಪ್ರಾಧಿಕಾರ ರಚನೆಯಾಗಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಕೈಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಖಡಕ ಎಚ್ಚರಿಕೆ ನೀಡಿದರು.ಮೂರುಸಾವಿರ ಶಾಖಾ ಮಠದ ಪ್ರಭುನೀಲಕಂಠ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲ ಬೋಳನ್ನವರ, ಕಿತ್ತೂರ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕಲಾವಿದ ಸಿ.ಕೆ.ಮೇಕ್ಕೆದ ಮಾತನಾಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ, ಜಿಪಂ ಮಾಜಿ ಸದಸ್ಯ ಬಿ.ಎಂ.ಚಿಕ್ಕನಗೌಡರ, ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ವಿಎಚ್‌ಪಿ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ರಫೀಕ್‌ ಬಡೇಘರ, ನಿಂಗಪ್ಪ ಚೌಡನ್ನವರ, ಗಿರೀಶ ಹರಕುಣಿ, ವಿರೇಶ ಹಲಕಿ, ಸುರೇಶ ಸಂಪಗಾಂವ, ಲಾಲಚಂದ ಗೂಗಡ ಹಾಗೂ ಮುಖಂಡರು ಅನುದಾನ ನೀಡಲು ಆಗ್ರಹಿಸಿದರು.ತಹಸೀಲ್ದಾರ್‌ ಹಣಮಂತ ಶಿರಹಟ್ಟಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾ ಮುಖಂಡ ವಿಜಯ ಮೆಟಗುಡ್ಡ, ಧೂಳಪ್ಪ ಇಟಗಿ, ಎಫ್.ಎಸ್.ಸಿದ್ದನಗೌಡರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಹಿರಿಯ ನ್ಯಾಯವಾದಿ ಎಂ.ವೈ.ಸೋಮನ್ನವರ, ಶ್ರೀಶೈಲ ಶರಣಪ್ಪನವರ, ಸುಭಾಷ ತುರಮರಿ, ಮಡಿವಾಳಪ್ಪ ಹೋಟಿ, ರಾಜು ಭರಮಗೌಡರ, ಪ್ರಕಾಶ ಸೊಗಲದ, ಗಂಗಪ್ಪ ಗುಗ್ಗರಿ, ರಾಜು ಬೋಳನ್ನವರ, ಗುಂಡಪ್ಪ ಸನದಿ, ಶಾಂತಾ ಮಡ್ಡಿಕಾರ, ರತ್ನಾ ಗೋದಿ, ಪ್ರೇಮಾ ಅಂಗಡಿ, ಮಡಿವಾಳಪ್ಪ ಚಿಕ್ಕೊಪ್ಪ, ಬಾಳನಗೌಡ ಪಾಟೀಲ, ಸಂತೋಷ ಕೊಳವಿ, ಸಂತೋಷ ಹಡಪದ, ಮುದಕಪ್ಪ ತೋಟಗಿ, ಮಹಾಂತೇಶ ಕೂಲಿನವರ, ಸುಭಾಷ ಬಾಗೇವಾಡಿ, ರಾಜು ನರಸನ್ನವರ, ಚಂದ್ರು ಕೊಪ್ಪದ ಹಾಗೂ ನೂರಾರು ಪ್ರತಿಭಟನಾಕಾರರು ಇದ್ದರು.

ಹೋರಾಟಕ್ಕೆ ಸರ್ಕಾರ ಕಣ್ಣು ತೆರೆಯದಿದ್ದರೆ ಮುಂದಿನ ದಿನಗಳಲ್ಲಿ ಸರಕಾದ ಕಣ್ಣು ತೆರೆಸುವ ನಿಟ್ಟಿನಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು.

-ಪ್ರಭುನೀಲಕಂಠ ಸ್ವಾಮೀಜಿ, ಮೂರುಸಾವಿರ ಶಾಖಾಮಠ.

ಸ್ಥಳೀಯ ಶಾಸಕರು ಗಮನ ಹರಿಸದಿರುವುದು ಅವರ ಅಭಿಮಾನ ಶೂನ್ಯ ಎತ್ತಿ ತೋರಿಸುತ್ತದೆ. ನಾಡಿನ ಜನ ಎಚ್ಚೆತ್ತುಕೊಂಡು ಸರ್ಕಾರ ₹200 ಕೋಟಿ ಬಿಡುಗಡೆ ಮಾಡುವವರೆಗೆ ಸುಮ್ಮನೆ ಕೂಡದೇ ಹೋರಾಡುವ ಅನಿವಾರ್ಯತೆ ಬಂದಿದೆ. ಗಂಡು ಮೆಟ್ಟಿದ ನಾಡಿನ ಗಟ್ಟಿತನದ ಹೋರಾಟಗಳು ನಡೆದು ಸರ್ಕಾರವನ್ನೇ ನಡುಗಿಸುವ ಕೆಲಸವಾಗಬೇಕಾಗಿದೆ.

-ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕರು.

ಶಾಸಕರು ಅನುದಾನ ದೊರಕಿಸಿ ಕೊಡದಿದ್ದರೇ ಅವರ ಮನೆಯ ಮುಂದೆ ಅಡುಗೆ ತಯಾರಿಸಿ ಊಟ ಮಾಡುವುದರೊಂದಿಗೆ ಧರಣಿ ನಡೆಸಲಾಗುವುದು. ಶಾಸಕರು ಅಧಿವೇಶನದಲ್ಲಿ ಪ್ರಬಲವಾಗಿ ಧ್ವನಿ ಎತ್ತಬೇಕು.

-ಶಂಕರ ಮಾಡಲಗಿ,

ಜೆಡಿಎಸ್ ಜಿಲ್ಲಾಧ್ಯಕ್ಷರು.

ಪ್ರಾಧಿಕಾರಕ್ಕೆ ಹಣ ನೀಡದೇ ಸರ್ಕಾರ ಚನ್ನಮ್ಮನಿಗೆ ಅನ್ಯಾಯವೆಸಗುತ್ತಿದೆ.

-ಶ್ರೀಶೈಲ ಬೋಳನ್ನವರ,

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷರು.

ಹೋರಾಟಗಾರರಲ್ಲಿ ಜಾತಿಯತೆ ಮಾಡದೆ ನ್ಯಾಯಸಮ್ಮತ ನಿರ್ಣಯ ಕೈಕೊಳ್ಳಬೇಕು.

-ಸಿ.ಕೆ.ಮೇಕ್ಕೆದ,

ಕಲಾವಿದ.

ಕಿತ್ತೂರ ಕರ್ನಾಟಕ ಎಂದು ಹೆಸರಿಗೆ ಮಾತ್ರ ಘೋಷಣೆ ಮಾಡಿದೆ. ಆದರೆ, ಅಭಿವೃದ್ಧಿಗೆ ನಿರ್ಲಕ್ಷಿಸಲಾಗುತ್ತಿದೆ.

-ಮಹಾದೇವ ತಳವಾರ,

ಕಿತ್ತೂರ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ.