ಧಾರವಾಡದ ಕಸಾಯಿಖಾನೆ ಸ್ಥಳಾಂತರಕ್ಕೆ ಭಜರಂಗದಳ ಪಟ್ಟು!

| Published : Sep 05 2025, 01:00 AM IST

ಧಾರವಾಡದ ಕಸಾಯಿಖಾನೆ ಸ್ಥಳಾಂತರಕ್ಕೆ ಭಜರಂಗದಳ ಪಟ್ಟು!
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಸಾಯಿಖಾನೆಯಲ್ಲಿ ನಿತ್ಯವೂ ಗೋವುಗಳ ಹತ್ಯೆ ನಡೆಯುತ್ತಿದ್ದರೂ ಕ್ರಮವಾಗುತ್ತಿಲ್ಲ ಎಂದು ಸಂಘಟನೆ ಕಾರ್ಯಕರ್ತರು ಕಸಾಯಿಖಾನೆಯೊಳಗೆ ಏಕಾಏಕಿ ನುಗ್ಗಲು ಪ್ರಯತ್ನಿಸಿದರು. ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ತಡೆದಾಗ, ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಧಾರವಾಡ: ಈದ್ ಮಿಲಾದ್ ಪ್ರಯುಕ್ತ ಕಸಾಯಿಖಾನೆಗಳಲ್ಲಿ ಗೋವುಗಳ ವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿಯ ಶಿವಾಜಿ ವೃತ್ತದ ಬಳಿ ಇರುವ ಕಸಾಯಿಖಾನೆಗೆ ಭಜರಂಗದಳದ ಕಾರ್ಯಕರ್ತರು ನುಗ್ಗಲು ವಿಫಲ ಯತ್ನ ನಡೆಸಿ ಕೊನೆಗೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು.

ಈ ಕಸಾಯಿಖಾನೆಯಲ್ಲಿ ನಿತ್ಯವೂ ಗೋವುಗಳ ಹತ್ಯೆ ನಡೆಯುತ್ತಿದ್ದರೂ ಕ್ರಮವಾಗುತ್ತಿಲ್ಲ ಎಂದು ಸಂಘಟನೆ ಕಾರ್ಯಕರ್ತರು ಕಸಾಯಿಖಾನೆಯೊಳಗೆ ಏಕಾಏಕಿ ನುಗ್ಗಲು ಪ್ರಯತ್ನಿಸಿದರು. ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ತಡೆದಾಗ, ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಗೋ ಹತ್ಯೆಗೆ ನಿಷೇಧವಿದ್ದರೂ ಬಹಿರಂಗವಾಗಿ ಅವುಗಳ ಹತ್ಯೆ ನಡೆಸಲಾಗುತ್ತಿದೆ. ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಅದರಲ್ಲೂ ಈದ್ ಮಿಲಾದ್ ಅಂತಹ ಹಬ್ಬಗಳಲ್ಲಿ ನೂರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಭಜರಂಗದಳ ಕಾರ್ಯಕರ್ತರು ಆಡಳಿತ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಾಗಲಿ, ಮಹಾನಗರ ಪಾಲಿಕೆ ಸಿಬ್ಬಂದಿಯಾಗಲಿ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ದಾಳಿ ಮಾಡಬೇಕಾಗಿದೆ. ಕೂಡಲೇ ಈ ಕಾಸಾಯಿಖಾನೆ ಸ್ಥಳಾಂತರಿಸಬೇಕೆಂದು ಭಜರಂಗದಳದ ಮುಖಂಡ ಶಿವಾನಂದ ಸತ್ತಿಗೇರಿ ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿ, ಕಸಾಯಿಖಾನೆ ಕುರಿತು ಮಹಾನಗರ ಪಾಲಿಕೆ ಕ್ರಮ ತೆಗೆದುಕೊಂಡರೆ ಭದ್ರತೆ ನೀಡುತ್ತೇವೆ. ಜತೆಗೆ ಇಲ್ಲಿರುವ ಗೋವುಗಳನ್ನು ಬೇರೆಡೆ ಸ್ಥಳಾಂತರಿಸುತ್ತೇವೆ. ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಕಾಸಾಯಿಖಾನೆಯ ಸ್ಥಳವನ್ನು ಪರಿಶೀಲಿಸಿದರು. ಈ ಸ್ಥಳದಲ್ಲಿ ಬ್ರಿಟಿಷ್ ಅಧಿಕಾರಿ ಸೇಂಟ್ ಜಾನ್ ಥ್ಯಾಕರೆಯ ಸಮಾಧಿಯೂ ಇದೆ. ಹೀಗಾಗಿ ಇದು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಆ ಇಲಾಖೆಯು ಹಿಂದೆ ಸರ್ವೇ ಮಾಡಲು ಆಗಮಿಸಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿಲ್ಲ. ಹೀಗಾಗಿ ಈ ಬಗ್ಗೆ ಈ ಬಾರಿ ಗಟ್ಟಿ ನಿರ್ಧಾರ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು. ಆಗ, ಒಂದು ವೇಳೆ ಆದಷ್ಟು ಶೀಘ್ರ ಈ ಕಸಾಯಿಖಾನೆ ಬಗ್ಗೆ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿ ಪ್ರತಿಭಟನೆ ಕೈ ಬಿಟ್ಟರು.

ಈ ಸಂದರ್ಭದಲ್ಲಿ ಭಜರಂಗದಳದ ಮುಖಂಡರಾದ ಅನುದೀಪ ಕುಲಕರ್ಣಿ, ಸಿದ್ದು ಹಿರೇಮಠ, ರಮೇಶ ಕದಂ, ಮಂಜುನಾಥ ಮಕ್ಕಳಗೇರಿ, ಪ್ರಶಾಂತ ನರಗುಂದ ಮತ್ತಿತರರು ಇದ್ದರು.