ಸಾರಾಂಶ
ರಾಜ್ಯ ಸರ್ಕಾರಕ್ಕೆ ಅವರ ಬಗ್ಗೆ ಮೃಧು ಧೋರಣೆ ಇದ್ದರೆ ಅವರನ್ನು ಮುಂದಿನ ವರ್ಷ ಬಳ್ಳಾರಿಯಲ್ಲಿ ನಡೆಯುವ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಅಥವಾ ಕನ್ನಡ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಿ, ಅದು ಬಿಟ್ಟು ದಸರಾ ಉತ್ಸವ ನಾಡಿನ ಹಬ್ಬವಾಗಿದ್ದು, ಹಿಂದುಗಳ ಧಾರ್ಮಿಕ ಆಚರಣೆಯಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪಿಕೊಳ್ಳದ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಜರಂಗಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಬಿ. ಮಂಜುನಾಥ್ ತೀವ್ರವಾಗಿ ಖಂಡಿಸಿದರು.ಬಾನು ಮುಷ್ತಾಕ್ ಅವರು ೨೦೨೩ರಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿ, ಕನ್ನಡ ತಾಯಿಯನ್ನು ಅರಿಶಿನ-ಕುಂಕುಮದಲ್ಲಿ ಅಲಂಕರಿಸಿ, ಧ್ವಜವನ್ನೂ ಅದೇ ಬಣ್ಣದಲ್ಲಿ ಹಾರಿಸುತ್ತಿದ್ದರೆ, ಅಲ್ಪಸಂಖ್ಯಾತಳಾದ ನಾನು ಹೇಗೆ ಅದನ್ನು ಒಪ್ಪಿಕೊಳ್ಳಲಿ ಎನ್ನುವ ಮೂಲಕ ಮತಾಂಧತೆಯ ಸಂದೇಶ ನೀಡಿದ್ದರು. ಅಂತಹವರನ್ನು ಹೇಗೆ ನಮ್ಮ ಧಾರ್ಮಿಕ ಆಚರಣೆಯಲ್ಲಿ ಭಾಗಿಗಳನ್ನಾಗಿ ಮಾಡಲು ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯ ಸರ್ಕಾರಕ್ಕೆ ಅವರ ಬಗ್ಗೆ ಮೃಧು ಧೋರಣೆ ಇದ್ದರೆ ಅವರನ್ನು ಮುಂದಿನ ವರ್ಷ ಬಳ್ಳಾರಿಯಲ್ಲಿ ನಡೆಯುವ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಅಥವಾ ಕನ್ನಡ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಿ, ಅದು ಬಿಟ್ಟು ದಸರಾ ಉತ್ಸವ ನಾಡಿನ ಹಬ್ಬವಾಗಿದ್ದು, ಹಿಂದುಗಳ ಧಾರ್ಮಿಕ ಆಚರಣೆಯಾಗಿದೆ. ೯ ದಿನಗಳು ಅತ್ಯಂತ ಶ್ರದ್ಧೆಯಿಂದ ನವದುರ್ಗೆಯರನ್ನು ಪೂಜಿಸಿ, ಕೊನೆಯ ದಿನ ವಿಜಯದಶಮಿಯನ್ನು ಆಚರಣೆ ಮಾಡುತ್ತೇವೆ. ಇಂತಹ ಹಿಂದುಗಳ ಹಬ್ಬದ ಉದ್ಘಾಟನೆಗೆ ಚಾಮುಂಡೇಶ್ವರಿಯ ಬಗ್ಗೆ ಭಕ್ತಿ ಇಲ್ಲದ ಮಹಿಳೆಯನ್ನು ನಿಯೋಜಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ತಾಯಿ ಶ್ರೀ ಚಾಮುಂಡೇಶ್ವರಿ ಬಗ್ಗೆ ಗೌರವವಿದೆ ಎಂದು ಹೇಳಿರುವ ಬಾನು ಮುಷ್ತಾಕ್ ಅವರಿಗೆ ತಾಯಿಯ ಬಗ್ಗೆ ಗೌರವ ಇದೆ ಎನ್ನುತ್ತಾರೆಯೇ ಹೊರತು ಭಕ್ತಿ ಇದೆ ಎಂದು ಹೇಳಲಿಲ್ಲ. ಮೊದಲು ಅವರಿಗೆ ಶ್ರೀ ಚಾಮುಂಡೇಶ್ವರಿ ಬಗ್ಗೆ ಭಕ್ತಿ ಇದೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಸದಾ ಹಿಂದುಗಳ ಭಾವನೆಗಳ ಜೊತೆಗೆ ಮಾತ್ರ ಇಂತಹ ಮನೋಭಾವ ತೋರುತ್ತದೆ. ಮುಸ್ಲಿಮರ ಧಾರ್ಮಿಕ ಆಚರಣೆಗಳ ಅಂದರೆ ಲಕ್ಷಾಂತರ ರು. ವೆಚ್ಚ ಮಾಡಿ ಹಜ್ ಯಾತ್ರೆಗೆ ಪ್ರೋತ್ಸಾಹ ನೀಡುವ ಕಾರ್‍ಯಕ್ರಮದ ಉದ್ಘಾಟನೆಗೆ ಹಿಂದುಗಳು, ಸಾಧು, ಸಂತರರನ್ನು ಏಕೆ ನಿಯೋಜಿಸುವುದಿಲ್ಲ. ಇದು ಹಿಂದುಗಳ ಭಾವನೆಗಳ ಮೇಲೆ ಮಾಡುವ ಪ್ರಹಾರವಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ ಸೆಪ್ಟಂಬರ್‌ನಲ್ಲಿ ಚಾಮುಂಡಿ ಬೆಟ್ಟ ಚಲೋ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದರು.ಸೇನೆಯ ಪದಾಧಿಕಾರಿಗಳಾದ ಹರ್ಷ, ಚೇತನ್, ಶಿವು, ಶೇಷಾದ್ರಿ, ಸತೀಶ್ ಇದ್ದರು.