ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಭಜರಂಗಸೇನೆ ಆಗ್ರಹ

| Published : Nov 30 2024, 12:45 AM IST

ಸಾರಾಂಶ

ಭಾರತದ ಸಹಾಯದಿಂದ ಉದ್ಭವವಾದ ಬಾಂಗ್ಲಾದೇಶ ಇಂದು ಮತಾಂಧ ಶಕ್ತಿಯಾಗಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಕೊಲೆ, ಅತ್ಯಾಚಾರ, ದೇವಾಲಯಗಳ ಮೇಲೆ ದಾಳಿ, ಬಲವಂತದ ಮತಾಂತರದಲ್ಲಿ ತೊಡಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು, ಅಲ್ಲಿ ಸೂಕ್ತ ರಕ್ಷಣೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿ ಭಜರಂಗ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಬಾಂಗ್ಲಾದೇಶದ ದೌರ್ಜನ್ಯಕೋರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಸಹಾಯದಿಂದ ಉದ್ಭವವಾದ ಬಾಂಗ್ಲಾದೇಶ ಇಂದು ಮತಾಂಧ ಶಕ್ತಿಯಾಗಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಕೊಲೆ, ಅತ್ಯಾಚಾರ, ದೇವಾಲಯಗಳ ಮೇಲೆ ದಾಳಿ, ಬಲವಂತದ ಮತಾಂತರದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಬಾಂಗ್ಲಾದಲ್ಲಿ ಶೇ.34 ರಷ್ಟಿದ್ದ ಹಿಂದೂಗಳ ಜನಸಂಖ್ಯೆ ಈಗ ಶೇ.7ಕ್ಕೆ ಕುಸಿದಿದೆ. ಮಾತ್ರವಲ್ಲದೆ 2040 ರೊಳಗೆ ಹಿಂದೂ ಜನಸಂಖ್ಯೆಯನ್ನು ಸಂಪೂರ್ಣವಾಗಿ ನಾಶ ಮಾಡಬೇಕೆಂದು ಮತಾಂಧ ಬಾಂಗ್ಲಾ ಮುಲ್ಲಾಗಳು ಬಹಿರಂಗವಾಗಿ ಕರೆ ಕೊಟ್ಟಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ವರ್ಷ ಪ್ರವಾಹದಲ್ಲಿ ನಿರ್ಗತಿಕರಾಗಿದ್ದ ಸುಮಾರು 10 ಲಕ್ಷ ಬಾಂಗ್ಲಾ ಮುಸಲ್ಮಾನರಿಗೆ ಇಸ್ಕಾನ್ ಸಂಸ್ಥೆ ಒಂದು ತಿಂಗಳ ಕಾಲ ಆಶ್ರಯ ಹಾಗೂ ಊಟ ಕೊಟ್ಟಿತು. ಆದರೆ, ಸ್ವಲ್ಪವೂ ಕೃತಜ್ಞತೆ ಇಲ್ಲದ ಅಲ್ಲಿನ ಸರ್ಕಾರ ಸಂತರನ್ನು ಬಂಧಿಸಿ ಕಿರುಕುಳ ಕೊಟ್ಟು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಮಾಡುತ್ತಿದೆ. ಬಾಂಗ್ಲಾ ದೇಶದ ವಿರುದ್ಧ ಯಾವುದೇ ಮುಲಾಜಿಲ್ಲದೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಮಂಜುನಾಥ್, ಮುಖಂಡರಾದ ಹರ್ಷ, ಚೇತನ್, ಸತೀಶ್, ಸವ್ಯಸಾಚಿ, ಪುನೀತ್, ಶೇಷಾದ್ರಿ, ಹೊಸಹಳ್ಳಿ ಶಿವು ಭಾಗವಹಿಸಿದ್ದರು.