ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಭಕ್ತಿಭಾವದಿಂದ ಆಚರಿಸಿದರು.
ಬಳ್ಳಾರಿ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಭಕ್ತಿಭಾವದಿಂದ ಆಚರಿಸಿದರು.
ಬೆಳಗ್ಗೆಯೇ ಹೊಸ ಉಡುಪು ಧರಿಸಿ ನಗರದ ಈದ್ಗಾ ಮೈದಾನಗಳು ಹಾಗೂ ವಿವಿಧ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳ್ಳಾರಿ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಭಕ್ತರು ಸೇರಿ ಸಾಮೂಹಿಕ ನಮಾಜ್ ಸಲ್ಲಿಸಿ, ದೇಶದ ಸುಭಿಕ್ಷೆ, ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸಿದರು. ಧರ್ಮಗುರುಗಳು ಬಕ್ರೀದ್ ಹಬ್ಬದ ಮಹತ್ವವನ್ನು ವಿವರಿಸಿ, ತ್ಯಾಗ ಮತ್ತು ಬಲಿದಾನದ ಸಂದೇಶವನ್ನು ಸಮಾಜಕ್ಕೆ ಸಾರಿದರು.ಇಲ್ಲಿನ ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಕ್ರೀದ್ ಹಬ್ಬದ ಮಹತ್ವ ಕುರಿತು ವಿವರಿಸಿದ ಮುಸ್ಲಿಂ ಧರ್ಮಗುರುಗಳು, ಬಕ್ರೀದ್ ಅಥವಾ ಈದ್-ಉಲ್-ಅಜ್ಹಾ ಮುಸ್ಲಿಂ ಸಮುದಾಯದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ತ್ಯಾಗ, ಬಲಿದಾನ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರು ದೇವರ ಆದೇಶಕ್ಕೆ ತಲೆಬಾಗಿ ತಮ್ಮ ಮಗನನ್ನೇ ಬಲಿಕೊಡಲು ಸಿದ್ಧರಾದ ಘಟನೆಯನ್ನು ಸ್ಮರಿಸುವುದೇ ಬಕ್ರೀದ್ ಹಬ್ಬದ ಮೂಲ ಉದ್ದೇಶವಾಗಿದೆ. ಅವರ ಅಪಾರ ಭಕ್ತಿ ಹಾಗೂ ತ್ಯಾಗ ಮನೋಭಾವವನ್ನು ಗೌರವಿಸುವ ಸಲುವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಸಹಾನುಭೂತಿ ಹಾಗೂ ಸಹಬಾಳ್ವೆಯ ಮೌಲ್ಯಗಳು ಸಮಾಜದಲ್ಲಿ ಬೆಳೆಸುವುದು ಹಬ್ಬದ ಮೂಲ ಆಶಯವೂ ಆಗಿದೆ.
ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ; ಪರಸ್ಪರ ಪ್ರೀತಿ, ಸಹೋದರತ್ವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಹಬ್ಬವೂ ಆಗಿದೆ ಎಂದು ಹೇಳಿದರು.ಸಾಮೂಹಿಕ ಪ್ರಾರ್ಥನೆಯ ಆನಂತರ ಮುಸ್ಲಿಮರು ಪರಸ್ಪರ ಅಪ್ಪಿಕೊಂಡು “ಈದ್ ಮುಬಾರಕ್” ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ವಿಶೇಷ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಕುಟುಂಬ ಸದಸ್ಯರು ಹಾಗೂ ಬಂಧು-ಬಳಗದವರೊಂದಿಗೆ ಹಬ್ಬ ಆಚರಿಸಿದರು. ಕೆಲವರು ಬಡವರಿಗೆ ಆಹಾರ ಹಾಗೂ ವಸ್ತ್ರ ವಿತರಿಸುವ ಮೂಲಕ ಮಾನವೀಯತೆ ಮೆರೆದರು.
ನಗರದ ಕೌಲ್ ಬಜಾರ್, ಗಾಂಧಿನಗರ, ರಾಯಲ್ ಸರ್ಕಲ್, ಬ್ರೂಸ್ ಪೇಟೆ, ಕಂಟೋನ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳ ಮಸೀದಿಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಹಬ್ಬದ ಪ್ರಯುಕ್ತ ಮಾರುಕಟ್ಟೆ ಪ್ರದೇಶಗಳಲ್ಲಿ ಸಹ ಜನಸಂದಣಿ ಹೆಚ್ಚಾಗಿತ್ತು.ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಪ್ರಮುಖ ಮಸೀದಿಗಳು, ಈದ್ಗಾ ಮೈದಾನಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ನಗರದಲ್ಲಿ ಶಾಂತಿಯುತವಾಗಿ ಹಬ್ಬ ಆಚರಣೆಯಾಗಿದ್ದು, ಹಿಂದೂ-ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಾಮರಸ್ಯ ಮೆರೆದರು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲಾಯಿತು. ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.