ಗೋಲೆಹಳ್ಳಿಯ ಮೌಲಾನಾ ಮುಪ್ತಿ ಮುಷ್ತಾಕ ಅಹ್ಮದ ನಾಯಕ ಅವರು ಹಬ್ಬದ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಹಳಿಯಾಳ; ತ್ಯಾಗ, ಬಲಿದಾನ, ದೇವ ನಿಷ್ಠೆ, ದೇವ ಪ್ರೀತಿಯ ಪ್ರತೀಕವಾಗಿ ಆಚರಿಸಲ್ಪಡುವ ಪವಿತ್ರ ಬಕ್ರೀದ್ ಹಬ್ಬವನ್ನು ಶನಿವಾರ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆ ಪಟ್ಟಣದ ವಿವಿಧ ಮಸೀದಿಗಳಿಂದ ಮೆರವಣಿಗೆಯಲ್ಲಿ ತೆರಳಿದ ಮುಸ್ಲಿಮರು ಧಾರ್ಮಿಕ ಶ್ಲೋಕಗಳನ್ನು ಪಠಣ ಮಾಡುತ್ತಾ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಈದ್ಗಾ ಮೈದಾನಕ್ಕೆ ಬಂದು ಸೇರಿ, ಬಕ್ರೀದ್ ಹಬ್ಬದ ಪ್ರಾರ್ಥನೆ ಸಲ್ಲಿಸಿದರು.

ಗೋಲೆಹಳ್ಳಿಯ ಮೌಲಾನಾ ಮುಪ್ತಿ ಮುಷ್ತಾಕ ಅಹ್ಮದ ನಾಯಕ ಅವರು ಹಬ್ಬದ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಬಕ್ರೀದ್ ಹಬ್ಬದ ಸಂದೇಶವನ್ನು ನೀಡಿದ ಮೌಲಾನ ಮುಫ್ತಿ ಫಯಾಜ್‌ ಅಹ್ಮದ ಖಾಸ್ಮಿ ಇಟ್ಟಂಗಿವಾಲೆ, ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಹಬ್ಬವಾಗಿದೆ. ದೇವರಿಗೆ ನಿಷ್ಠೆ, ಶ್ರದ್ಧೆ, ವಿಧೇಯತೆ ತೋರುವವರಿಗೆ ಸದಾ ದೇವರ ಅನುಗ್ರಹ ಇರುತ್ತದೆ. ದೇವರನ್ನು ನಂಬಿದವರ ಬಾಳು ಶಾಶ್ವತವಾಗಿರುತ್ತದೆ ಎಂದರು.

ಪ್ರಾರ್ಥನಾ ವಿಧಿಯಲ್ಲಿ ಉದ್ಯಮಿ ಆರ್.ಎಂ. ಬಸರಿಕಟ್ಟಿ, ಜಿಲ್ಲಾ ವಕ್ಫ್‌ ಸಮಿತಿ ಮಾಜಿ ಅಧ್ಯಕ್ಷ ಮಹಮದ್ಖಯ್ಯಾಂ ಮುಗದ, ಯುವ ಉದ್ಯಮಿ ಅಜರ್ ಬಸರಿಕಟ್ಟಿ, ಅಲಿಂ ಬಸರಿಕಟ್ಟಿ, ಫಯಾಜ್ ಶೇಖ್, ಪ್ರಮುಖರಾದ ಇಮ್ತಿಯಾಜ್ ಶೇಖ್, ಎಂ.ಎ. ಕಾಗದ ಮೊದಲಾದವರು ಇದ್ದರು.

ಶಾಸಕ ಆರ್.ವಿ. ದೇಶಪಾಂಡೆ ಪಟ್ಟಣದ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಮರಿಗೆ ಶುಭಾಶಯ ಕೋರಿ, ನಾಡಿನೆಲ್ಲೆಡೆ ಶಾಂತಿ ಸಾಮರಸ್ಯ ನೆಲೆಸುವಂತೆ ದೇವರು ಅನುಗ್ರಹಿಸಲಿ, ಉತ್ತಮ ಮಳೆ ಬೆಳೆಯಾಗಲಿ ಎಂದು ಹಾರೈಸಿದರು.

ಗ್ರಾಮೀಣ ಭಾಗದಲ್ಲಿಯೂ ಬಕ್ರೀದ್:

ಜೋಗನಕೊಪ್ಪ, ತಟ್ಟಿಗೇರಾ, ಅಡಕೆಹೊಸುರ, ಕಾವಲವಾಡ, ತೇರಗಾಂವ, ಭಾಗವತಿ, ಗೋಲೆಹಳ್ಳಿ, ಮುರ್ಕವಾಡ, ಅಮ್ಮನಕೊಪ್ಪ, ತತ್ವಣಗಿ, ಜಾವಳ್ಳಿ, ತಿಮ್ಮಾಪುರ ಮೊದಲಾದೆಡೆ ಬಕ್ರೀದ್ ಆಚರಣೆ ನಡೆಯಿತು.