ಸಾರಾಂಶ
ಈದ್ಗಾ ಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ । ಶುಭಾಶಯ ವಿನಿಯಮಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲಾ ಕೇಂದ್ರ ಸೇರಿದಂತೆ ಕಾಫಿ ನಾಡಿನಾದ್ಯಂತ ಸೋಮವಾರ ಬಕ್ರೀದ್ ಆಚರಣೆ ನಡೆಯಿತು.ಮುಸ್ಲಿಂ ಸಮುದಾಯದವರು, ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.
ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ತಾಜಾರಿನ್, ಸಂಗೀನಾ, ನೆಹರು ನಗರದ ಬದ್ರಿಯಾ, ಉಪ್ಪಳ್ಳಿಯ ಶಾದ್ರುಲಿ, ಕಲ್ಲುದೊಡ್ಡಿಯ ಅಮ್ಜದ್ ಖಾರಾರ್ ಹಾಗೂ ಆದಿಶಕ್ತಿ ನಗರದ ಮಸೀದಿಗಳಲ್ಲಿ ಬ್ಯಾರಿ ಸಮುದಾಯದವರು ಬೆಳಿಗ್ಗೆ 8 ಗಂಟೆ ವೇಳೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಬೆಳಿಗ್ಗೆ 10ರ ವೇಳೆಗೆ ಮುಸ್ಲಿಂ ಸಮುದಾಯದವರು ಚಿಕ್ಕಮಗಳೂರಿನ ವಿಜಯಪುರ ಹಾಗೂ ಕೆಂಪನ ಹಳ್ಳಿಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕೆಂಪನಹಳ್ಳಿ ಈದ್ಗಾ ಮೈದಾನಕ್ಕೆ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಭೇಟಿ ನೀಡಿ ಮಾತನಾಡಿ, ಬಕ್ರೀದ್ ಹಬ್ಬದ ಶುಭಾಶಯ ಸಲ್ಲಿಸಿದರು. ಎಲ್ಲರೂ ಜಾತಿ, ಧರ್ಮವನ್ನು ಬದಿಗಿಟ್ಟಿ ಸೌಹಾರ್ದತೆಯಿಂದ ಬಾಳಬೇಕು. ಇದು, ಸಂವಿಧಾನದ ಆಶಯವಾಗಿದೆ. ಅದರಂತೆ ಎಲ್ಲರೂ ನಡೆದು ಕೊಳ್ಳಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಮದಶೀರ್, ವಕ್ಫ್ ಬೋರ್ಡ್ ಚೇರ್‌ಮನ್ ಶಾಹೀದ್ ರಜ್ವಿ ಹಾಗೂ ಧರ್ಮಗುರುಗಳು ಹಾಜರಿದ್ದರು.ಕೊಟ್ಟಿಗೆಹಾರ: ಬಣಕಲ್, ಚಕ್ಕಮಕ್ಕಿ, ಹೊರಟ್ಟಿ, ಕೊಟ್ಟಿಗೆಹಾರ, ಗಬ್ ಗಲ್ ಮತ್ತಿತರ ಕಡೆ ಮುಸ್ಲಿಂ ಬಾಂಧವರು, ಮಕ್ಕಳು ಹೊಸ ಬಟ್ಟೆ ತೊಟ್ಟು ಮಸೀದಿಗೆ ಹೋಗಿ ಕುರಾನ್ ಪಠಿಸಿ ನಮಾಜ್ ಮಾಡಿದರು, ಪರಸ್ಪರ ಹಬ್ಬದ ಶುಭಾಶಯ ಕೋರಿದರು,
ಬಳಿಕ ಖಬರಸ್ಥಾನಕ್ಕೆ ತೆರಳಿ ಕುಟುಂಬದಲ್ಲಿ ಮೃತರಾದ ಹಿರಿಯರಿಗೆ ಕುಟುಂಬದ ಸದಸ್ಯರ ಮುಕ್ತಿಗಾಗಿ ಪ್ರಾರ್ಥಿಸಿದರು. ಕೊಟ್ಟಿಗೆಹಾರ ಜುಮ್ಮಾ ಮಸೀದಿ ದರ್ಮಗುರು ಇಮ್ಧಾಧಿ ಕನ್ಯಾಣ ಪ್ರವಚನ ನೀಡಿ, ಮುಸ್ಲಿಂ ಬಾಂಧವರು ಆಚರಿಸುವ ಹಬ್ಬಗಳಲ್ಲಿ ಬಕ್ರೀದ್ ಹಬ್ಬ ದೊಡ್ಡ ಹಬ್ಬವಾಗಿದ್ದು, ಈ ಹಬ್ಬ ತ್ಯಾಗ, ಬಲಿದಾನದ ಪ್ರತೀಕವಾಗಿದೆ. ಸುಮಾರು 5 ಸಾವಿರ ವರ್ಷಗಳ ಹಿಂದಿನ ಘಟನೆ ಸ್ಮರಣೆಯೇ ಬಕ್ರೀದ್ ಹಬ್ಬದ ಆಚರಣೆ. ಪ್ರವಾದಿ ಇಬ್ರಾಹಿಂ ಅವರು ಇಸ್ಲಾಮಿನ ಏಕದೇವ ವಿಶ್ವಾಸ ಸ್ಥಾಪನೆಗಾಗಿ ತನ್ನ ಹೆತ್ತವರು, ಸ್ವಂತ ಕುಟುಂಬ ಮನೆ, ಆಸ್ತಿ ತ್ಯಾಗ ಮಾಡಿ ದೇಶಾಂತರ ಹೊರಟು ದೇವರ ಆದೇಶದಂತೆ ವೃದ್ದಾಪ್ಯದಲ್ಲಿ ಸ್ವಂತ ಮಗುವನ್ನು ಬಲಿ ಕೊಡಲು ಹೊರಟ ಅಮರ ಇತಿಹಾಸ ಬಕ್ರೀದ್ ಹಬ್ಬ ನೆನೆಸುತ್ತದೆ ಎಂದರು.ಬಣಕಲ್ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಸಫ್ವಾನ್ ಫೈಝೀ ಮಾತನಾಡಿ, ನಾವು ಸಮಾಜದಲ್ಲಿ ಬಡವರಿಗೆ, ಪರರಿಗೆ ದಾನ ಮಾಡುವ ಔದಾರ್ಯ ಹೊಂದಿ ನಮ್ಮ ಸಾಂಸಾರಿಕ ಜೀವನವನ್ನು ಸಫಲಗೊಳಿಸಬೇಕು. ಉಳ್ಳವರು ಬಡವರಿಗೆ ದಾನ ನೀಡುವ ಮೂಲಕ ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರ್ಮಗುರು ಅಮಿರ್ ಅಲ್ ಫಾರೂಕಿ ಇದ್ದರು. ಚಕ್ಕಮಕ್ಕಿ ಮಸೀದಿಯಲ್ಲೂ ಧರ್ಮಗುರು ಸಿನಾನ್ ಫೈಝೀ ಕುರಾನ್ ಪ್ರವಚನ ನೀಡಿದರು. 17 ಕೆಸಿಕೆಎಂ 2ಚಿಕ್ಕಮಗಳೂರಿನ ಕೆಂಪನಹಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.